ಶಿವಮೊಗ್ಗ: ಮಹಿಳೆಯ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-01-31 15:52 GMT

ಶಿವಮೊಗ್ಗ, ಜ. 31: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಮಗುವಿಗೆ ಇರಿದು ಗಾಯ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

ನಗರದ ಮಹಾದೇವಿ ಟಾಕೀಸ್ ಬಳಿಯ ಕಂಟ್ರಿ ಕ್ಲಬ್ ರಸ್ತೆಯ ನಿವಾಸಿ ಸುಧಾಕರ ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್‍ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.

ಘಟನೆ ಹಿನ್ನೆಲೆ: ಕೊಲೆಗೀಡಾದ ಮಲ್ಲವ್ವ (26) ಎಂಬ ಮಹಿಳೆಯು 2 ವರ್ಷಗಳ ಹಿಂದೆ ಗಂಡನಿಂದ ಬೇರೆಯಾಗಿ 3 ವರ್ಷದ ಮಗುವಿನೊಂದಿಗೆ ತನ್ನ ತವರು ಮನೆಯಲ್ಲಿ ಪೊರಕೆ ವ್ಯಾಪಾರ ಮಾಡಿಕೊಂಡು ವಾಸವಿದ್ದಳು. ಈ ಮೊದಲೇ ಮದುವೆಯಾಗಿದ್ದ ಸುಧಾಕರನು ಮಲ್ಲವ್ವನನ್ನು ಮದುವೆಯಾಗುವುದಾಗಿ ನಂಬಿಸಿ ಬಾಣಸಂದ್ರಕ್ಕೆ ಕರೆದುಕೊಂಡಿ ಹೋಗಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆಗಾಗ್ಗೆ ಶಿವಮೊಗ್ಗದಲ್ಲಿರುವ ತನ್ನ ಮನೆಗೆ ಬಂದು ಹೋಗುತ್ತಿದ್ದ. 

ಮಲ್ಲವ್ವ ಪರ ಪುರುಷನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆಂಬ ಸಂಶಯ ಸುಧಾಕರನಲ್ಲಿ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕೊಲೆಗೆ ನಿರ್ಧರಿಸಿದ್ದ. ಅದರಂತೆ ಶಿವಮೊಗ್ಗ ನಗರದಲ್ಲಿಯೇ ನೆಲೆಸೋಣ ಎಂದು ನಂಬಿಸಿ, ಮಲ್ಲವ್ವ ಮತ್ತು ಆಕೆಯ ಮಗನನ್ನು ಶಿವಮೊಗ್ಗಕ್ಕೆ ಕರೆತಂದಿದ್ದ. ಹರಿಗೆ ಸಮೀಪದ ಕೆಂಗಲಕಟ್ಟೆ ಕೆರೆ ಜಾಗದಲ್ಲಿ ಚಾಕುವಿನಿಂದ ಮಲ್ಲವ್ವಳ ಕುತ್ತಿಗೆ ಹಾಗೂ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದ. ಹಾಗೆಯೇ ಮಗುವಿಗೂ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. 

ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಧಾಕರನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ತದನಂತರ ಪೊಲೀಸರು ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News