ಶಿವಮೊಗ್ಗದಲ್ಲಿ ಕೆಗಾರಿಕೆಗಳಿಗೆ ಪೂರಕ ವಾತಾವರಣ : ಕಾಸಿಯಾ ಅಧ್ಯಕ್ಷ ಬಸವರಾಜ ಎಸ್. ಜವಳಿ
ಶಿವಮೊಗ್ಗ, ಜ.31: ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ವಾತಾವರಣವಿದ್ದು, ಸಣ್ಣ ಕೈಗಾರಿಕೋದ್ಯಮಿಗಳು ಇತ್ತ ಚಿತ್ತ ಹರಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ಜೆ.ಆರ್. ವಾಸುದೇವ್ ಸಲಹೆ ನೀಡಿದ್ದಾರೆ. ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಜಿಲ್ಲಾ ಕೈಗಾರಿಕಾ ಕೇಂದ್ರ, ರಾಜ್ಯ ಹಣಕಾಸು ಸಂಸ್ಥೆ, ಮಾಚೇನಹಳ್ಳಿ ಕೈಗಾರಿಕಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಕೃಷಿ ವ್ಯವಹಾರ ರಫ್ತು ಮತ್ತು ಆಹಾರ ಸಂಸ್ಕರಣಾ ನೀತಿ - 2015 ಹಾಗೂ ಕೆಎಸ್‌ಎಫ್‌ಸಿಯ ಹೊಸ ಯೋಜನೆಗಳು’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರು ಸಣ್ಣ ಕೈಗಾರಿಕೆಗಳಿಂದ ತುಂಬಿ ತುಳುಕುತ್ತಿದೆ. ಜೊತೆಗೆ ವೆಚ್ಚವೂ ಹೆಚ್ಚಾಗುತ್ತಿದೆ. ಕಾರ್ಮಿಕರ ಅಲಭ್ಯತೆ ಸೇರಿದಂತೆ ಟ್ರಾಫಿಕ್ ಸಮಸ್ಯೆಯೂ ಹೆಚ್ಚಿದೆ. ಈ ಕಾರಣದಿಂದ ಬೆಂಗಳೂರಿನಾಚೆ ಕೈಗಾರಿಕೋದ್ಯಮಿಗಳು ಬರಬೇಕು. ಶಿವಮೊಗ್ಗ, ಮೈಸೂರಿನಂತಹ ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸಬೇಕು. ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಉತ್ತಮ ವಾತಾವರಣವಿದೆ ಎಂದರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಬಿ. ನಿಲೋಗಲ್ ಅವರು ಮಾತನಾಡಿ, ರಾಜ್ಯ ಹಣಕಾಸು ಸಂಸ್ಥೆಯು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸಣ್ಣ ಕೈಗಾರಿಕೆ ಆರಂಭಕ್ಕೆ ಹಲವು ಯೋಜನೆ ಕಾರ್ಯಗತಗೊಳಿಸಿದೆ. ರಿಯಾಯಿತಿ ದರದಲ್ಲಿ ಸಾಲಸೌಲಭ್ಯ ಕಲ್ಪಿಸುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಂಡು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನಿಡಿದರು.
ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಉದ್ದಿಮೆಗಳ ಸ್ಥಾಪನೆಗೆ ಪೂರಕ ವಾತಾವರಣವಿದೆ. ಎಲ್ಲ ರೀತಿಯ ಮೂಲಸೌಕರ್ಯಗಳ ವ್ಯವಸ್ಥೆಯಿದೆ. ಕಾಸಿಯಾ ಸಂಸ್ಥೆಯು ಜಿಲ್ಲೆಗೆ ಉದ್ದಿಮೆಗಳನ್ನು ಕರೆತರಬೇಕು. ಹೊಸ ಉದ್ದಿಮೆಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ. ಎ. ದಯಾನಂದ್, ತಮಿಳುನಾಡು ಚೆನ್ನೈನ ಇಇಪಿಪಿಯ ಪ್ರಾದೇಶಿಕ ನಿರ್ದೇಶಕ ಸಿ.ಎಚ್.ನಾಡಿಗೇರ್, ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಆರ್.ಗಣೇಶ್, ಕೆಎಸ್‌ಎಫ್‌ಸಿ ಪ್ರಧಾನ ವ್ಯವಸ್ಥಾಪಕ ಡಾ.ಕೆ.ಸಿ. ಬಸವಯ್ಯ, ಡಿಐಸಿ ಜಂಟಿ ನಿರ್ದೇಶಕ ಆರ್. ಗಣೇಶ್, ಪ್ರಮುಖರಾದ ಎಂ.ಎ. ರಮೇಶ್ ಹೆಗಡೆ, ಎಸ್. ವಿಶ್ವೇಶ್ವರಯ್ಯ, ರವಿಕಿರಣ ಕುಲಕರ್ಣಿ ಸೇರಿದಂತೆ ಮೊದಲಾದವರಿದ್ದರು.
ಕೃಷಿ ಬಲವರ್ಧನೆಯಾಗಬೇಕು: ಡಿ.ಸಿ.
‘ಕೃಷಿ ವ್ಯವಹಾರ ರಫ್ತು ಮತ್ತು ಆಹಾರ ಸಂಸ್ಕರಣಾ ನೀತಿ -2015 ಹಾಗೂ ಕೆಎಸ್‌ಎಫ್‌ಸಿಯ ಹೊಸ ಯೋಜನೆಗಳು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ, ಈ ಹಿಂದೆ ದೇಶವು ಕೃಷಿ ಪ್ರಧಾನ ರಾಷ್ಟ್ರವಾಗಿತ್ತು. ಕೃಷಿಯ ಉತ್ಪಾದನೆಯು ದೇಶದ ಆರ್ಥಿಕತೆಯ ಬೆನ್ನೆಲುಬಾಗಿತ್ತು. ಪ್ರಸ್ತುತ ಕೃಷಿ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿಲ್ಲ. ಕೃಷಿ ಆಧಾರಿತ ಉದ್ದಿಮೆಗಳು ಹೆಚ್ಚಾಗಬೇಕು. ಕೃಷಿಯು ಆರ್ಥಿಕವಾಗಿ ಲಾಭದಾಯಕವಾಗಬೇಕು. ಈ ಮೂಲಕ ದೇಶದ ಆರ್ಥಿಕತೆಯು ಬಲಪಡಿಸುವ ವ್ಯವಸ್ಥೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಕೃಷಿಯು ಆರ್ಥಿಕವಾಗಿ ಬಲವರ್ಧನೆಯಾದರೆ, ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ನಷ್ಟದ ಪ್ರಮಾಣವು ತಗ್ಗಲಿದೆ. ಬೆಳೆಗೆಗಳಿಗೆ ವೈಜ್ಞಾನಿಕ ಬೆಲೆ ದೊರಕಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದರು.