ಮಹಿಳೆಯ ನಿರ್ಧಾರಗಳಿಗೆ ಮನ್ನಣೆ ಸಿಕ್ಕಾಗ ಸಮಾನತೆ ಸಾಧ್ಯ: ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನದ ಗೋಷ್ಠಿಯಲ್ಲಿ ಡಿಐಜಿ ರೂಪಾ
ದಾವಣಗೆರೆ, ಜ.31: ಮಹಿಳೆಯ ನಿರ್ಧಾರಗಳಿಗೆ ಮನ್ನಣೆ ನೀಡುವ ಕಾರ್ಯಗಳಾದಾಗ ಮಾತ್ರ ಸಮಾನತೆ, ಸಮಸಮಾಜ ನಿರ್ಮಾಣ ಸಾಧ್ಯವೆಂದು ಗೃಹರಕ್ಷ ದಳದ ಡಿಐಜಿ ಡಿ. ರೂಪಾ ಹೇಳಿದ್ದಾರೆ.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ನಡೆದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಗುರುವಾರ ನಡೆದ ‘ಮಹಿಳೆ: ಸೃಜನಶೀಲತೆಯ ಸಾಧ್ಯತೆಗಳು’ ಗೋಷ್ಠಿ-4ರಲ್ಲಿ ಆಡಳಿತಾತ್ಮಕ ಸಾಧ್ಯತೆಗಳು ಕುರಿತು ಅವರು ಮಾತನಾಡಿದರು. ನಮ್ಮ ಮನೆಯಲ್ಲಿ ಹೆಣ್ಣು, ಗಂಡು ಮಕ್ಕಳನ್ನು ಸಮನಾಗಿ ಕಾಣುವ, ಬೆಳೆಸುವ ಕಾರ್ಯವಾಗಬೇಕು. ಹೆಣ್ಣಿನ ಆಸೆ, ಕನಸು, ಗುರಿಗಳನ್ನು ಪ್ರೋತ್ಸಾಹಿಸುವ ಕಾರ್ಯಗಳು ನಡೆಯಬೇಕು ಎಂದರು. ಯಾವ ಮಹಿಳೆ ಆರ್ಥಿಕ, ಸಾಮಾಜಿಕ ವಿಷಯಗಳ ಕುರಿತು ಸ್ವತಂತ್ರಳಾಗಿ ನಿರ್ಧಾರ ಕೈಗೊಳ್ಳುತ್ತಾಳೋ ಅದುವೇ ಮಹಿಳಾ ಸಬಲೀಕರಣ. ದಿನನಿತ್ಯ ಆಕೆ ಮಾಡುವ ಕಾರ್ಯಗಳು ಬೆಟ್ಟದಷ್ಟಿದ್ದರೂ ಆಕೆಯ ಕೆಲಸಕ್ಕೆ ಬೆಲೆ ಇಲ್ಲದಾಗಿದೆ. ಕಾನೂನು ಮಹಿಳೆಗೆ ಶೇ. 33ರಷ್ಟು ಮೀಸಲಾತಿ ನೀಡಿದ್ದರೂ ಅದರ ಪಾಲನೆಯಾಗುತ್ತಿಲ್ಲ. ಹೆಣ್ಣಿಗೆ ಶಿಕ್ಷಣದ ಮಹತ್ವ ತಿಳಿದರೆ ಇಡೀ ಕುಟುಂಬವೇ ಶಿಕ್ಷಣದಲ್ಲಿ ಮೇಲುಗೈ ಸಾಧಿಸಲು ಸಾಧ್ಯ ಎಂದರು.
ಹೆಣ್ಣಿಗೆ ಶಿಕ್ಷಣದ ಪ್ರಾಮುಖ್ಯತೆ ತಿಳಿದಾಗ ಸಮಾಜ ಸುಧಾರಣೆ ಸಾಧ್ಯ. ಸಬಲೀಕರಣವೆಂದರೆ ನಮ್ಮ ಕುಟುಂಬ, ಸಮಾಜಕ್ಕೆ ಒಳಿತು ಮಾಡುವುದು ಅಷ್ಟೇ ಅಲ್ಲ, ಆಕೆ ಸ್ವಇಚ್ಛೆಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು. ಆರ್ಥಿಕತೆ, ಉದ್ಯೋಗ, ಕುಟುಂಬ ನಿರ್ವಹಣೆ ವಿಷಯದಲ್ಲಿ ಮಹಿಳೆಯ ಅಭಿಪ್ರಾಯಗಳು ಪರಿಗಣಿಸುವಂತಾಗಬೇಕೆಂದು ಅವರು ಕರೆ ನೀಡಿದರು.
ಗೋಷ್ಠಿಯಲ್ಲಿ ಸುಶೀಲದೇವಿ ರಾವ್ ಅಧ್ಯಕ್ಷತೆ ವಹಿಸಿ, ಸಾಂಸ್ಕೃತಿಕ ಸಾಧ್ಯತೆಗಳು ವಿಷಯದ ಕುರಿತು ಮಾತನಾಡಿದರು. ವಕೀಲ ಎನ್.ಟಿ.ಮಂಜುನಾಥ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಲೋಕೇಶ್ ಅಗಸನಕಟ್ಟೆ ಉಪಸ್ಥಿತರಿದ್ದರು.
ಶೈಲಜಾ ತಿಮ್ಮೇಶ್ ಸ್ವಾಗತಿಸಿದರು. ಚಂದ್ರಿಕಾ ನಿರೂಪಿಸಿದರು. ವಿಜಯ ಚಂದ್ರಶೇಖರ್ ವಂದಿಸಿದರು.
‘ಗೃಹರಕ್ಷಕ ದಳದಲ್ಲಿ ಸಾಕಷ್ಟು ಬದಲಾವಣೆ’
ಗೃಹರಕ್ಷಕ ದಳದಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದ್ದು, ಸಿಬ್ಬಂದಿಯ ನೇಮಕಾತಿಯನ್ನು ಪೊಲೀಸ್ ನೇಮಕಾತಿ ಪ್ರಾಧಿಕಾರವೇ ಮಾಡುತ್ತಿದೆ ಎಂದು ರಾಜ್ಯ ಗೃಹ ರಕ್ಷಕ ದಳದ ಐಜಿಪಿ ಡಿ.ರೂಪಾ ಮೌದ್ಗಿಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆಯನ್ನು ತರಲು ಹಣಕಾಸು ಇಲಾಖೆ ಜೊತೆಗೂ ಮಾತುಕತೆ ನಡೆಸಲಾಗಿದೆ. ಆದಷ್ಟು ಶೀಘ್ರ ಹಣ ಮಂಜೂರಾಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮಿಳುನಾಡಿನ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸೌಲಭ್ಯ ನೀಡುವುದೂ ಸೇರಿದಂತೆ ಜೈಲಿನ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ಮಾಡಿದ್ದ ವರದಿ ಹಿನ್ನೆಲೆಯಲ್ಲಿ ಸರಕಾರ ನಡೆಸಿದ್ದ ತನಿಖಾ ವರದಿಯಲ್ಲೂ ಅದೇ ವಿಚಾರ ಸ್ಪಷ್ಟವಾಗಿರುವುದು ಖುಷಿ ತಂದಿದೆ ಎಂದರು.
ಕವಿಗೋಷ್ಠಿಯಲ್ಲಿ ಮನಸೆಳೆದ ಕವಿತೆಗಳು
ದಾವಣಗೆರೆ ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ಪ್ರಕೃತಿ, ಸಾಮಾಜಿಕ ಸ್ಪಂದನೆ, ಸಿದ್ದಗಂಗಾಶ್ರೀ ಸೇರಿದಂತೆ ಪ್ರಚಲಿತ ವಿಷಯಗಳ ಕುರಿತು ಕವಿತೆಗಳನ್ನು ವಾಚಿಸಿದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಆಶಯ ನುಡಿದರು. ಹರಿಹರದ ಸುಬ್ರಹ್ಮಣ್ಯ ನಾಡಿಗೇರ, ಕೊಟ್ರೇಶ್ ಕಮಲಾಪುರ, ಕೆ. ಸಿರಾಜ್ ಅಹ್ಮದ್, ಕುಂದೂರು ಮಂಜಣ್ಣ ಸೇರಿದಂತೆ 20ಕ್ಕೂ ಅಧಿಕ ಕವಿಗಳು ಕವನ ವಾಚಿಸಿದರು.