ಹೆಂಡದಂಗಡಿಯ ಬಾಗಿಲು ಮುಚ್ಚಲಿ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿ

Update: 2019-01-31 18:59 GMT

ಕರ್ನಾಟಕದಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರು ನಡೆಸಿದ ಬೃಹತ್ ರ್ಯಾಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಸುಮಾರು 200 ಕಿಲೋಮೀಟರ್ ದಾರಿಯನ್ನು ಈ ಮಹಿಳೆಯರು ಸವೆಸಿದ್ದಾರೆ. ಅದಕ್ಕಾಗಿ ತೆಗೆದುಕೊಂಡ ಸಮಯ 12 ದಿನ. ಕರ್ನಾಟಕದಲ್ಲಿ ಜನಾಂದೋಲನ ಅಳಿದೇ ಬಿಟ್ಟಿತೋ ಎನ್ನುವಷ್ಟರಲ್ಲಿ ರಾಜ್ಯಾದ್ಯಂತ ಸಾವಿರಾರು ಮಹಿಳೆಯರು ಮದ್ಯಪಾನದ ವಿರುದ್ಧ ಒಂದಾಗಿ ರಾಜಧಾನಿಗೆ ಮುತ್ತಿಗೆ ಹಾಕಿದ್ದಾರೆ. ಈ ಚಳವಳಿ ಯಾವುದೇ ರಾಜಕೀಯ ಕಾರಣಗಳಿಂದ ಹುಟ್ಟಿರುವುದಲ್ಲ. ಜನರೊಳಗಿಂದಲೇ ಜನರಿಗಾಗಿ ಹುಟ್ಟಿರುವುದು. ಅವರ ಅಸಹಾಯಕತೆ, ನೋವು, ದುಮ್ಮಾನಗಳೇ ಮಹಿಳಯರನ್ನು ಬೀದಿಗಿಳಿಸಿತು. ಇವರಾರು ರಾಜಕೀಯ ನಾಯಕ ದಿನಗೂಳಿಗಾಗಿ ಮೆರವಣಿಗೆ ಹೊರಟವರಲ್ಲ. ಹೆಚ್ಚಿನವರು ಕೂಲಿ ಕಾರ್ಮಿಕರು, ರೈತರು. ಇನ್ನು ಸಾಧ್ಯವೇ ಇಲ್ಲ ಎಂಬ ಸಂಕಟದ ಸಂದರ್ಭದಲ್ಲಿ ತಮ್ಮ ಪುರುಷರು ಹಾಕಿದ ಗೆರೆಯನ್ನು ಮೀರಿ ರಸ್ತೆಗೆ ಬಂದರು. ಇಂತಹದೊಂದು ಮಹತ್ವದ ಚಳವಳಿಗೆ ಸರಕಾರ ಸ್ಪಂದಿಸಿದ ರೀತಿ ಮಾತ್ರ ನಿರಾಶಾದಾಯಕ. ‘ಏಕಾಏಕಿ ಮದ್ಯಪಾನ ನಿಷೇಧ ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ‘ಏಕಾಏಕಿ’ ಎನ್ನುವ ಪದವನ್ನು ಬಳಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಯಾಕೆಂದರೆ ಮದ್ಯಪಾನವನ್ನು ನಿಷೇಧಿಸುವ ಒತ್ತಾಯ ಕೇಳಿ ಬರುತ್ತಿರುವುದು ಇಂದು ನಿನ್ನೆಯೇನೂ ಅಲ್ಲ. ಮಣ್ಣಿನ ಮಗನ ಮಗನಾದ ಕುಮಾರಸ್ವಾಮಿ, ಗ್ರಾಮೀಣ ಪ್ರದೇಶದ ಜನರು ಈ ಮದ್ಯ ಚಟದಿಂದ ಎದುರಿಸುತ್ತಿರುವ ಸಮಸ್ಯೆಗಳ ಅರಿವಿಲ್ಲದವರೇನೂ ಅಲ್ಲ. ಬಹುಶಃ ಮದ್ಯಪಾನ ನಿಷೇಧಿಸುವುದು ಅವರಿಗೆ ಇಷ್ಟವಿಲ್ಲ ಎಂದಷ್ಟೇ ನಾವು ಭಾವಿಸಬೇಕು.

ಮದ್ಯಪಾನ ದುಶ್ಚಟಗಳ ನೇರ ಫಲಾನುಭವಿಗಳು ಮಹಿಳೆಯರು. ರೈತರ ಆತ್ಮಹತ್ಯೆಯ ಹಿಂದೆಯೂ ಈ ಮದ್ಯಪಾನ ತನ್ನದೇ ಆದ ಪಾತ್ರವನ್ನು ವಹಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿರುವ ಕೌಟುಂಬಿಕ ದೌರ್ಜನ್ಯಗಳಲ್ಲೂ ಮದ್ಯದ ಪಾತ್ರ ದೊಡ್ಡದು. ಇದೇ ಸಂದರ್ಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಚಟುವಟಿಕೆಗಳಿಗೂ ಮದ್ಯ ಸೇವನೆಯೇ ಕಾರಣ. ಜೊತೆಗೆ, ಆರೋಗ್ಯ ನಾಶ, ಬಡತನ, ಮಕ್ಕಳ ಮೇಲೆ ದೌರ್ಜನ್ಯ, ಶೈಕ್ಷಣಿಕವಾಗಿ ಮಕ್ಕಳ ಹಿಂದುಳಿಯುವಿಕೆ ಹೀಗೆ ಸಮಾಜವನ್ನು ಹಂತ ಹಂತವಾಗಿ ನಾಶ ಮಾಡುತ್ತಿರುವ ಈ ಎಲ್ಲ ಅಂಶಗಳನ್ನು ಮದ್ಯ ಸೇವನೆ ಸುತ್ತಿಕೊಂಡಿದೆ. ಮದ್ಯ ಸೇವನೆಯನ್ನು ಸಾರ್ವತ್ರಿಕವಾಗಿ ಉಳಿಸಿ ಬಡತನ, ಅಪರಾಧ, ದೌರ್ಜನ್ಯ, ಅನಾರೋಗ್ಯ ಇವೆಲ್ಲವನ್ನು ಎದುರಿಸುವುದೆಂದರೆ ಗಾಳಿಯಲ್ಲಿ ಗುದ್ದಾಡಿದಂತೆ. ರೋಗದ ಕಾರಣಗಳನ್ನು ಹುಡುಕಿ ಅದಕ್ಕೆ ಔಷಧಿ ಕೊಡುವುದು ಇಂದಿನ ಅಗತ್ಯ. ನಮ್ಮ ಸರಕಾರ ನಡೆಯುತ್ತಿರುವುದೇ ‘ಅಬಕಾರಿ ಹಣ’ದಿಂದ ಎನ್ನುವ ಸುಳ್ಳೊಂದನ್ನು ಮುಂದಿಟ್ಟುಕೊಂಡು ಎಲ್ಲ ರಾಜಕೀಯ ನಾಯಕರೂ ಮದ್ಯ ಸೇವನೆಯನ್ನು ಪೋಷಿಸಿಕೊಂಡು ಬಂದರು. ಇಂದು ಕುಮಾರಸ್ವಾಮಿಯವರೂ ಅದೇ ಸುಳ್ಳಿನ ಸಹಾಯದಿಂದ ಹೋರಾಟಗಾರರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಅಬಕಾರಿ ಹಣ ಬೇಕಾಗಿರುವುದು ಸರಕಾರ ನಡೆಸುವುದಕ್ಕಲ್ಲ, ಈ ಹಣ ವಿವಿಧ ಪಕ್ಷಗಳನ್ನು ಸಾಕುತ್ತಿದೆ.

ಅಬಕಾರಿ ದಂಧೆ ಸಂಪೂರ್ಣ ಇಲ್ಲವಾದರೆ, ಪಕ್ಷಗಳನ್ನು ಮುನ್ನಡೆಸುವುದಕ್ಕೆ ಹಣವಿಲ್ಲದಾಗುತ್ತದೆ. ಇದು ಯಾವುದೋ ಒಂದು ಪಕ್ಷಕ್ಕೆ ಸಂಬಂಧ ಪಟ್ಟ ವಿಷಯವಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲವೂ ಅಬಕಾರಿ ಹಣದ ತಳಹದಿಯಲ್ಲೇ ನಿಂತಿವೆ. ಆ ತಳಹದಿ ಅಲುಗಾಡಿದರೆ ಪಕ್ಷದೊಳಗೆ ಭೂಕಂಪ ಸೃಷ್ಟಿಯಾಗಬಹುದು. ಸರಕಾರ ಅಬಕಾರಿ ಇಲಾಖೆ ಸರಕಾರಕ್ಕೆ ಕೊಟ್ಟಂತೆ ಮಾಡಿ, ದುಪ್ಪಟ್ಟು ವಸೂಲು ಮಾಡುತ್ತದೆ. ಒಂದೆಡೆ ಅತ್ಯಧಿಕ ಮದ್ಯ ಮಾರಾಟ ಮಾಡುವುದಕ್ಕೆ ಸರಕಾರ ಗುರಿ ಹೇರುತ್ತದೆ. ಇದರಿಂದಾಗಿ ಸರಕಾರದ ಖಜಾನೆಗೆ ಹೆಚ್ಚು ಹಣ ಬರುತ್ತದೆ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಹಣವನ್ನು ಬಳಕೆ ಮಾಡಬಹುದು ಎನ್ನುವುದು ಸರಕಾರದ ತರ್ಕ. ಆದರೆ ಮದ್ಯ ಸೇವನೆ ಹೆಚ್ಚಾಗುತ್ತಿದ್ದ ಹಾಗೆಯೇ ನಾಡು ಸಾಮಾಜಿಕವಾಗಿ ಪತನ ಹೊಂದಲು ಆರಂಭಿಸುತ್ತದೆ. ಮದ್ಯ ಸೇವನೆಯಿಂದ ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಲಕ್ಷಾಂತರ ಜನರಿದ್ದಾರೆ. ಅವರ ಆರೋಗ್ಯಕ್ಕಾಗಿಯೂ ಸರಕಾರವೇ ಹಣ ವೆಚ್ಚ ಮಾಡಬೇಕು. ಮದ್ಯ ಸೇವನೆಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕ್ರಿಮಿನಲ್ ಚಟುವಟಿಕೆಗಳನ್ನು ತಡೆಯಲು ಸರಕಾರ ಹೂಡುವ ಸಣ್ಣದೇನಲ್ಲ. ಮದ್ಯ ಮಾರಾಟದಿಂದ ಎಷ್ಟು ಹಣ ಸರಕಾರದ ಖಜಾನೆಗೆ ಸೇರುತ್ತದೆಯೋ, ಅದರ ದುಪ್ಪಟ್ಟು ಹಣವನ್ನು ಮದ್ಯದಿಂದಾದ ಹಾನಿಯನ್ನು ಸರಿದೂಗಿಸಲು ಬಳಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಮದ್ಯ ನಿಷೇಧದಿಂದ ಆಗುವ ಲಾಭವನ್ನೊಮ್ಮೆ ಕಲ್ಪಿಸಿಕೊಳ್ಳೋಣ. ಜನಸಾಮಾನ್ಯರಲ್ಲಿ ಉಳಿತಾಯ ಹೆಚ್ಚುತ್ತದೆ.

ಇದು ಅವರ ದೈನಂದಿನ ಬದುಕನ್ನು ಸುಧಾರಿಸುವಂತೆ ಮಾಡಬಹುದು. ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆ, ಔಷಧಿಗಳಿಗೆ ಚೆಲ್ಲುವ ದುಡ್ಡು ಕೂಡ ಉಳಿಯುತ್ತದೆ. ವ್ಯಕ್ತಿಯ ಆರೋಗ್ಯ ಸಮಾಜದ ಆರೋಗ್ಯವೂ ಹೌದು. ಪಾನಮತ್ತನಾಗಿ ವಿವೇಕ ಕಳೆದುಕೊಂಡು ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯಗಳಿಗೂ ಕಡಿವಾಣ ಬೀಳುತ್ತದೆ. ಕೌಟುಂಬಿಕ ಪರಿಸರ ಉತ್ತಮಗೊಳ್ಳುತ್ತದೆ. ಅನಕ್ಷರತೆ, ಅಪೌಷ್ಟಿಕತೆ ಇತ್ಯಾದಿಗಳಿಂದ ಮಕ್ಕಳು, ಮಹಿಳೆಯರು ಪಾರಾಗುತ್ತಾರೆ. ಇವೆಲ್ಲವುಗಳಿಗಾಗಿ ಸರಕಾರ ಸುರಿಯುತ್ತಿರುವ ಹಣ ಉಳಿತಾಯವಾಗುತ್ತದೆ. ಮಾತ್ರವಲ್ಲ ‘ಹೆಂಡ ಸಾರಾಯಿ ಸಹವಾಸ- ಹೆಂಡತಿ ಮಕ್ಕಳು ಉಪವಾಸ’ ಎನ್ನುವ ಸರಕಾರಿ ಜಾಹೀರಾತುಗಳಿಗೆ ಸುರಿಯುವ ಕೋಟ್ಯಂತರ ಹಣವನ್ನು ಬಡವರ ಏಳಿಗೆಗಾಗಿ ಬಳಸಬಹುದು. ಸಂಪೂರ್ಣ ಸಾರಾಯಿ ನಿಷೇಧ ಮಾಡಿದಲ್ಲಿ, ಕಳ್ಳಭಟ್ಟಿ ದಂಧೆ ಹೆಚ್ಚುತ್ತದೆ ಎನ್ನುವ ಆರೋಪಗಳಿವೆ. ನಿಜ. ಮದ್ಯದ ದಾಸನಾದವನು ಅಷ್ಟು ಸುಲಭದಲ್ಲಿ ಸೇವನೆಯನ್ನು ಬಿಡಲಾರ. ಅವನು ಅಡ್ಡದಾರಿ ಹುಡುಕುತ್ತಾನೆ.

ಆಗ ಸಮಾಜದಲ್ಲಿ ಕದ್ದು ಮುಚ್ಚಿ ನಕಲಿ ಸಾರಾಯಿ ತಯಾರಿ ಆರಂಭವಾಗುತ್ತದೆ. ಆದರೆ ಮದ್ಯನಿಷೇಧದ ಜೊತೆ ಜೊತೆಗೇ ಕಳ್ಳಭಟ್ಟಿ ಸಾರಾಯಿಯನ್ನು ಬಗ್ಗು ಬಡಿಯುವುದಕ್ಕೂ ವ್ಯೆಹವನ್ನು ರೂಪಿಸಬೇಕು. ಕಳ್ಳಭಟ್ಟಿ ಸಾರಾಯಿ ತಯಾರಕರ ವಿರುದ್ಧ ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಪೊಲೀಸ್ ಇಲಾಖೆ, ರಾಜಕೀಯ ನಾಯಕರ ಬೆಂಬಲವಿಲ್ಲದೆ ಕಳ್ಳಭಟ್ಟಿ ತಯಾರಿಸುವುದು ಸುಲಭವಲ್ಲ. ಇದೇ ಸಂದರ್ಭದಲ್ಲಿ ‘ಮದ್ಯ ಸೇವನೆ’ಯ ಹಣದಿಂದ ಸರಕಾರ ನಡೆಸುತ್ತೇನೆ ಎನ್ನುವ ಹೇಳಿಕೆಯೇ ಅನೈತಿಕವಾದುದು. ಇಂತಹ ಮನಸ್ಥಿತಿ ನಾಡನ್ನು ಅಧಃಪತನಕ್ಕೆ ಕೊಂಡೊಯ್ಯಬಹುದು. ವೇಶ್ಯಾವಾಟಿಕೆಗೆ ಬಹಿರಂಗ ಅನುಮತಿ ನೀಡಿ ಅವರಿಂದ ತೆರಿಗೆ ಸಂಗ್ರಹಿಸಿ ಆಡಳಿತ ನಡೆಸುವುದಕ್ಕೂ, ಮದ್ಯದ ಹಣದಿಂದ ನಾಡನ್ನು ಮುನ್ನಡೆಸುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಬೇಕಾದರೆ ಹೆಂಡದಂಗಡಿಯ ಬಾಗಿಲು ಮುಚ್ಚಲೇ ಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ರ್ಯಾಲಿ ಒಂದು ಆರಂಭ. ಇದು ನಾಡಿನಾದ್ಯಂತ ಬೃಹತ್ ಚಳವಳಿಯಾಗಿ ಮುಂದುವರಿಯಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News