ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಷ ಸೇವಿಸಿದ ಮೂವರು ದಲಿತರು: ಓರ್ವನ ಸ್ಥಿತಿ ಗಂಭೀರ
ಶಿವಮೊಗ್ಗ, ಫೆ. 1: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಸಿದ್ಲಿಪುರ ಗ್ರಾಮದ ಮಾದಿಗ ಸಮುದಾಯದ ಮೂವರು, ಕಚೇರಿ ಆವರಣದಲ್ಲಿಯೇ ವಿಷಪ್ರಾಶನ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಇದರಲ್ಲಿ ಓರ್ವರ ಸ್ಥಿತಿ ಗಂಭೀರವಾಗಿದೆ.
ಪ್ರಕಾಶ್ (30) ಶೇಖರಪ್ಪ (40) ಹಾಗೂ ಶಿವರಾಜ್ (28) ವಿಷಪ್ರಾಶನ ಮಾಡಿದವರೆಂದು ಗುರುತಿಸಲಾಗಿದೆ. ಮೂವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾಜ್‍ರವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರದೀಪ್ ಕುಮಾರ್ ರವರು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕಾರಣವೇನು?: ಸಿದ್ಲಿಪುರ ಗ್ರಾಮದಲ್ಲಿ ಮಾದಿಗ ಸಮುದಾಯದವರು ಸುಮಾರು 32 ಎಕರೆ ಪ್ರದೇಶದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿದ್ದರು. ಜಮೀನಿನ ಮಾಲಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯವಿತ್ತು. ಖಾಸಗಿ ವ್ಯಕ್ತಿಯ ಪರವಾಗಿ ನ್ಯಾಯಾಲಯ ತೀರ್ಪು ಬಂದಿದ್ದು, ಅದರಂತೆ ಇತ್ತೀಚೆಗೆ ಪೊಲೀಸ್ ಭದ್ರತೆಯಲ್ಲಿ ಜಮೀನು ತೆರವುಗೊಳಿಸಲಾಗಿತ್ತು. ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದ ಮಾದಿಗ ಸಮುದಾಯದವರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ್ದರು.
ಇದರಿಂದ ಆಕ್ರೋಶಗೊಂಡ ಮಾದಿಗ ಸಮುದಾಯದವರು, ಬುಧವಾರದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಸೂಕ್ತ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಗುರುವಾರ ಕೂಡ ಪ್ರತಿಭಟನೆ ಮುಂದುವರಿಸಿದ್ದರು.
'ಜಿಲ್ಲಾಧಿಕಾರಿ ಕೆ. ಎ. ದಯಾನಂದ್‍ರವರಿಗೆ ಮನವಿ ಅರ್ಪಿಸಲಾಗಿತ್ತು. ಜಮೀನಿನ ಮಾಲಕತ್ವದ ದಾಖಲೆಗಳನ್ನು ನೀಡಿದ್ದೆವು. ಪಿಟಿಸಿಎಲ್ ಕಾಯ್ದೆಯಡಿ ವಿವಾದ ತರದೆ ವಂಚಿಸಲಾಗಿದೆ ಎಂಬುವುದನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಅವರು ನ್ಯಾಯಾಲಯದ ತೀರ್ಪುಗಳ ಬಗ್ಗೆಯೇ ಹೇಳಿದರು. ಸೂಕ್ತ ಭರವಸೆ ಅವರಿಂದ ಸಿಗಲಿಲ್ಲ. ಇದರಿಂದ ಬೇಸರಗೊಂಡ ಪ್ರಕಾಶ್, ಶೇಖರಪ್ಪ ಹಾಗೂ ಶಿವರಾಜ್ ಎಂಬುವರು ಪ್ರತಿಭಟನಾ ಸ್ಥಳದಲ್ಲಿಯೇ ಕ್ರಿಮಿನಾಶಕ ಸೇವಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ಮುಖಂಡ ಪ್ರದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹೋರಾಟ ಮುಂದುವರಿಸುತ್ತೇವೆ: 'ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಪ್ರದೇಶವಾದ ಸಿದ್ಲಿಪುರ ಗ್ರಾಮದ ಸರ್ವೇ ನಂಬರ್ 86 ರಲ್ಲಿ ಒಟ್ಟು 31.09 ಎಕರೆ ಖುಷ್ಕಿ ಜಮೀನನ್ನು 1954-55 ನೇ ಸಾಲಿನಲ್ಲಿ ತೋಟಿ ತಳವಾರ ಸರ್ವೀಸ್ ಇನಾಂ ಅಡಿಯಲ್ಲಿ ಗ್ರಾಮದ ಮಾದಿಗ ಸಮಾಜದವರಿಗೆ ಸರ್ಕಾರ ಉಂಬಳಿಯಾಗಿ ನೀಡಿತ್ತು. ಅಂದಿನಿಂದ ಮಾದಿಗ ಸಮುದಾಯದವರ ಹೆಸರಿನಲ್ಲಿ ಜಮೀನು ಉಳುಮೆ ಮಾಡುತ್ತಿರುವ ದಾಖಲೆ, ಸ್ವಾಧೀನದ ಹಕ್ಕುಪತ್ರಗಳಿವೆ. ಹಾಗೆಯೇ 1978 ರಲ್ಲಿ ವಿಒಎಸಿ ಕಾಯ್ದೆ ತಿದ್ದುಪಡಿಯೊಂದಿಗೆ ಅಂದಿನ ಸರ್ಕಾರದ ಅಂಗೀಕಾರದೊಂದಿಗೆ ಆದೇಶ ಹೊರಡಿಸಿತ್ತು' ಎಂದು ಮುಖಂಡ ಪ್ರದೀಪ್ ಕುಮಾರ್ ದೂರಿದ್ದಾರೆ.
'ಕಳೆದ ಹಲವು ವರ್ಷಗಳಿಂದ ಬಡ ಮಾದಿಗ ಸಮುದಾಯದವರು ಜಮೀನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಕೂಡ ವಿವಿಧ ಬೆಳೆಗಳನ್ನು ಜಮೀನಿನಲ್ಲಿ ಬೆಳೆಯಲಾಗಿತ್ತು. ಖಾಸಗಿ ವ್ಯಕ್ತಿಗೆ ಸೇರಿದ್ದೆಂದು ಹೇಳಿ, ಬಲವಂತವಾಗಿ ಜಮೀನು ಕಿತ್ತುಕೊಳ್ಳಲಾಗಿದೆ. ಅಧಿಕಾರಿಗಳ್ಯಾರೂ ನಮ್ಮ ರಕ್ಷಣೆಗೆ ಬರುತ್ತಿಲ್ಲ. ಪ್ರಸ್ತುತ ನಡೆಸುತ್ತಿರುವ ಹೋರಾಟವನ್ನು ಮುಂದುವರಿಸಲಾಗುವುದು. ಅನ್ಯಾಯಕ್ಕೊಳಗಾಗಿರುವ ಮಾದಿಗ ಸಮುದಾಯದವರಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ಗೌರವವಿದೆ. ಆದರೆ ಖಾಸಗಿ ವ್ಯಕ್ತಿಗೆ ಜಮೀನಿನ ಮಾಲಕತ್ವ ಹಸ್ತಾಂತರವಾಗುವಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಈ ಬಗ್ಗೆ ಸಕ್ಷಮ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತರುವ ಕೆಲಸ ಮಾಡಿಲ್ಲ. ಕಳೆದ ಎರಡೂವರೆ ವರ್ಷಗಳ ಹಿಂದೆ ಸ್ವತಃ ನಾನೇ ಸರ್ಕಾರಕ್ಕೆ ದೂರು ನೀಡಿದ್ದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಇಲ್ಲಿಯವರೆಗೂ ಈ ಬಗ್ಗೆ ತನಿಖೆಯಾಗಿಲ್ಲ. ಜಿಲ್ಲಾಧಿಕಾರಿಗಳು ಈ ವಿವಾದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೂಲಂಕಷ ಪರಿಶೀಲನೆ ನಡೆಸಬೇಕು. ತನಿಖಾ ತಂಡವನ್ನು ಕೂಡ ರಚಿಸಬೇಕು. ಆಗ ಮಾತ್ರ ಸತ್ಯಾಂಶ ಏನೆಂಬುವುದು ಗೊತ್ತಾಗಲಿದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು' ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.