ಹಣ ಹಾಕುತ್ತಾರೆಂದು ಐದು ವರ್ಷ ಕಾದಿದ್ದಕ್ಕೆ ಬೋನಸ್ ಸಿಕ್ಕಿದೆ: ಸಚಿವ ಎಚ್.ಡಿ.ರೇವಣ್ಣ
ಬೆಂಗಳೂರು, ಫೆ.1: ಮುಂದಿನ ಲೋಕಸಭೆ ಚುನಾವಣೆಯಲ್ಲಿ ನೇರವಾಗಿ ಹಣ ಕೊಡಲಿಕ್ಕೆ ಆಗುವುದಿಲ್ಲ. ಹೀಗಾಗಿ ಮೊದಲೇ 6 ಸಾವಿರ ರೂ.ರೈತರಿಗೆ ನೀಡುವ ಘೋಷಣೆ ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಚುನಾವಣೆ ವೇಳೆ ಜನರಿಗೆ ಹಣ ನೀಡಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮೊದಲೇ ಹಣ ನೀಡಲು ಮುಂದಾಗಿದ್ದಾರೆ. ಚುನಾವಣೆ ಕಾರಣಕ್ಕೆ ರೈತರಿಗೆ ಹಣ ನೀಡುವ ಘೋಷಣೆ ಮಾಡಲಾಗಿದೆ ಎಂದು ಟೀಕಿಸಿದರು.
ರೈತರ ಸಾಲಮನ್ನಾ ನಿರೀಕ್ಷೆ ಇತ್ತು. ಎಲ್ಲರ ಖಾತೆಗೆ ಹಣ ಹಾಕುತ್ತಾರೆಂದು ಐದು ವರ್ಷಗಳಿಂದ ಕಾದಿದ್ದಕ್ಕೆ ಕೊನೆಗೂ ಬೋನಸ್ ಸಿಕ್ಕಿದೆ. ಅಸಂಘಟಿತ ಕಾರ್ಮಿಕರಿಗೆ ಕೆಲ ಘೋಷಣೆ ಮಾಡಲಾಗಿದೆ. ಆದರೆ, ಜನರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಧಾರಕ್ಕೆ ಬದ್ಧ: ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಸನ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂಬುದು ನಮ್ಮ ಇಚ್ಛೆ. ಆದರೆ, ಅವರು ಎಲ್ಲೆ ಸ್ಪರ್ಧಿಸಿದರೂ ನಮ್ಮ ಅಭ್ಯಂತರವಿಲ್ಲ. ಮೈತ್ರಿ ಸಂಬಂಧ ದೇವೇಗೌಡರ ನಿರ್ಧಾರಕ್ಕೆ ಬದ್ಧ ಎಂದು ಅವರು ಹೇಳಿದರು.