ದಲಿತ, ಮುಸ್ಲಿಮರ ಬಗ್ಗೆ ಮಾತನಾಡಲು ಮೋಹನ್ ಭಾಗವತ್ ಯಾರು?: ಪ್ರೊ.ಮಹೇಶ್ ಚಂದ್ರಗುರು
ಮೈಸೂರು,ಫೆ.1: ದಲಿತರು ಮತ್ತು ಮುಸ್ಲಿಮರ ಬಗ್ಗೆ ಮಾತನಾಡಲು ಮೋಹನ್ ಭಾಗವತ್ ಯಾರು? ಆತನಿಗೆ ಇತಿಹಾಸದ ಪ್ರಜ್ಞೆಯೇ ಇಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನರ ಬಗ್ಗೆ ಅಂಬೇಡ್ಕರ್ ಅವರಿಗೆ ಗೌರವ ಇಲ್ಲದಿದ್ದರೆ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುತ್ತಿದ್ದರೇ ? ಮೋಹನ್ ಭಾಗವತ್‍ಗೆ ಇತಿಹಾಸದ ಪ್ರಜ್ಞೆಯೇ ಇಲ್ಲ. ಆತನ ಹೇಳಿಕೆ ಕುಚೋದ್ಯದಿಂದ ಕೂಡಿದೆ. ಇವನ ಹೇಳಿಕೆಯನ್ನು ಯಾರೂ ನಂಬಬಾರದು ಎಂದು ಹೇಳಿದರು.
ಧರ್ಮ ಸಂಸತ್ ನಲ್ಲಿ ದಲಿತ-ಮುಸ್ಲಿಮರ ಬಗ್ಗೆ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ಕೆಂಡ ಮಂಡಲರಾದ ಅವರು “ವಾರ್ತಾಭಾರತಿ”ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. "ಈತನಿಗೆ ದಲಿತ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ದಲಿತರು ಮತ್ತು ಮುಸ್ಲಿಮರ ಬಗ್ಗೆ ಈತನಿಗೇನು ಗೊತ್ತು. ಈ ದೇಶದಲ್ಲಿ ದಲಿತರು-ಮುಸಲ್ಮಾನರು ಒಂದಾದರೆ ನಮಗೆ ಉಳಿಗಾಲವಿಲ್ಲ ಎಂಬ ಭಯ ಉಂಟಾಗಿದೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ದಲಿತರಾಗಲಿ, ಮುಸಲ್ಮಾನರಾಗಲಿ ವಿಚಲಿತರಾಗಬಾರದು ಎಂದು ಕರೆ ನೀಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಈತನಿಗೇನು ಗೊತ್ತು ಎಂದು ಹರಿಹಾಯ್ದ ಅವರು, 1952 ರಲ್ಲಿ ಆಲ್ ಇಂಡಿಯಾ ಶೆಡುಲ್ ಕ್ಯಾಸ್ಟ್ ಫೆಡರೇಷನ್ ಉದ್ಘಾಟನೆ ವೇಳೆ ಮೂರು ಕರೆಯನ್ನು ನೀಡಿದ್ದಾರೆ. ಒಂದು ಈ ದೇಶದ ದಲಿತರೆಲ್ಲಾ ಒಟ್ಟಾಗಿ ಬಂದು ಬೌದ್ಧ ಧರ್ಮ ಸ್ವೀಕರಿಸಿ, ಎರಡನೆಯದಾಗಿ ಈ ದೇಶದ ದಲಿತರು ಮತ್ತು ಮುಸ್ಲಿಮರು ಒಂದಾಗಿ ದೇಶ ಆಳಬೇಕು, ಮತ್ತೊಂದು ದಲಿತರು, ಮುಸ್ಲಿಮರು ಮತ್ತು ಹಿಂದುಳಿದವರು ರಾಜಕೀಯ ಅಧಿಕಾರ ಪಡೆಯಬೇಕು ಎಂದು ಕರೆ ನೀಡಿದ್ದಾರೆ. ಮೊದಲು ಇತಿಹಾಸವನ್ನು ಅರಿತು ನಂತರ ಭಾಗವತ್ ಹೇಳಿಕೆ ನೀಡಲಿ ಎಂದರು.