ಮೈಸೂರು: ಮೂವರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಸೆರೆ
ಮೈಸೂರು,ಫೆ.1: ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ತಿಂಗಳಲ್ಲಿ ಮೂವರನ್ನು ಬಲಿ ಪಡೆದ ನರಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನ ತಿಮ್ಮನ ಹೊಸಳ್ಳಿ ಗ್ರಾಮದ ಕಡ್ಡಿ (60) ಎಂಬವರನ್ನು ನಿನ್ನೆ ಹುಲಿ ದಾಳಿ ನಡೆಸಿ ಕೊಂದಿತ್ತು. ಅಷ್ಟೇ ಅಲ್ಲದೇ ಮಧು ಹಾಗೂ ಚಿನ್ನಪ್ಪ ಕೂಡ ಹುಲಿ ದಾಳಿಗೆ ಬಲಿಯಾಗಿದ್ದರು. ಇಂದು ಆ ನರಭಕ್ಷಕ ಹುಲಿ ಸೆರೆಯಾಗಿದೆ. ಹುಲಿ ಶೋಧಕಾರ್ಯರಣೆಗೆ ಆರು ಆನೆಗಳನ್ನು ಬಳಸಿಕೊಳ್ಳಲಾಗಿತ್ತು. ಅರ್ಜುನ, ಅಭಿಮನ್ಯ, ಕೃಷ್ಣ, ಸರಳ, ಗೋಪಾಲಸ್ವಾಮಿ ಮತ್ತು ಭೀಮನ ಸಹಾಯದಿಂದ ಈ ಹುಲಿಯನ್ನು ಹಿಡಿಲಾಯಿತು. ಶಾರ್ಪ್ ಶೂಟರ್ ನಿಂದ ಅರೆವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದ್ದು, ಬೆಂಗಳೂರಿನಿಂದ ಬಂದಿದ್ದ ಶಾರ್ಪ್ ಶೂಟರ್ ಗಳು ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಹಾಡಿ ವಾಸಿಗಳು, ಮತ್ತು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ.
ಸೆರೆ ಹಿಡಿದ ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ತರಲಾಗಿದೆ. ಹುಲಿಯ ಮುಂಭಾಗದ ಬಲಗಾಲು ಮತ್ತು ಹಿಂಭಾಗದ ಎಡಗಾಲಿಗೆ ಗಾಯವಾಗಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅರಣ್ಯಾಧಿಕಾರಿಗಳಾದ ಜಯರಾಮ್, ರವಿಕುಮಾರ್, ನಾರಾಯಣಸ್ವಾಮಿ, ಸಿದ್ದರಾಮಪ್ಪ ಮತ್ತು ವೈದ್ಯರುಗಳಾದ ಡಾ.ಉಮಾಶಂಕರ್, ಡಾ.ಮುಜೀಬ್ ಮತ್ತು ಅರವಳಿಕೆ ಮದ್ದು ನೀಡಿದ ಅಕ್ರಂ ಪಾಷಾ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.