ಕೇಂದ್ರ ಸರಕಾರ ರೈತರ ತುಟಿಗೆ ತುಪ್ಪ ಸವರಿದೆ: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಫೆ.1: ಕೇಂದ್ರ ಸರಕಾರ ತನ್ನ ಮಧ್ಯಂತರ ಬಜೆಟ್‌ನಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 6 ಸಾವಿರ ರೂ.ತುಂಬುತ್ತೇವೆಂಬ ಘೋಷಣೆ ರೈತರ ತುಟಿಗೆ ತುಪ್ಪ ಸುರಿಯುವ ಕಾರ್ಯವಷ್ಟೆ. ಇದನ್ನು ಹೊರತು ಪಡಿಸಿದರೆ ಕೃಷಿ ವಲಯಕ್ಕೆ ಯಾವುದೆ ಪ್ರಯೋಜನವಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ರೈತರ ಖಾತೆಗಳಿಗೆ 6 ಸಾವಿರ ರೂ.ಹಾಕುವುದರಿಂದ ರೈತರ ಮೂಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕುವುದಿಲ್ಲ. ಇದರಿಂದ ರೈತರ ಉತ್ಪಾದನಾ ಶಕ್ತಿಯೂ ಹೆಚ್ಚುವುದಿಲ್ಲ. ನಿತ್ಯ ಆತ್ಮಹತ್ಯೆಗೆ ಒಳಗಾಗಿರುವವರನ್ನು ತಪ್ಪಿಸಲು ಆಗುವುದಿಲ್ಲ. ರೈತನ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆಯೂ ಆಗುವುದಿಲ್ಲ.
ರೈತರಿಗೆ ವಚನ ಕೊಟ್ಟಂತೆ ಡಾ.ಸ್ವಾಮಿನಾಥನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡುವ ಮಾತನ್ನು ಮರೆತು ರೈತರಿಗೆ ಇಂತಹ ಕೆಳಹಂತದ ಪ್ರಚಾರದ ಕಾರ್ಯಕ್ರಮವಾಗಿ ಇದನ್ನು ಘೋಷಿಸಲ್ಪಟ್ಟಿದೆ. ಇದು ಕೇವಲ ರೈತನ ತುಟಿಗೆ ತುಪ್ಪ ಹಚ್ಚುವ ಕಾರ್ಯಕ್ರಮವೇ ಹೊರತು ರೈತರನ್ನು ಸಧೃಡಗೊಳಿಸುವ ಕಾರ್ಯಕ್ರಮವಲ್ಲ. ನರೇಂದ್ರ ಮೋದಿ ಸರಕಾರ ಕಳೆದ ಐದು ವರ್ಷಗಳಿಂದ ರೈತರನ್ನು ನಿರಾಶೆಗೊಳಿಸುತ್ತಲೇ ಬಂದಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರಗಾಲದ ಬೇಗೆಯಿಂದ ಬಳಲಿರುವ ರೈತರಿಗೆ ಸಂಪೂರ್ಣ ಸಾಲ ಮನ್ನಾ ಘೋಷಣೆ ಮಾಡಿ, ರೈತನ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆಯನ್ನು ನೀಡದ ಸರಕಾರ, ರೈತರಿಗೆ ಕೇವಲ ಬಡ್ಡಿ ಮನ್ನಾ ಅಥವಾ ಚಾಲ್ತಿಯಲ್ಲಿರುವ ರೈತರಿಗೆ ಸಾಲಕ್ಕೆ ಶೇ.2 ರಿಂದ ಶೇ.3 ರಿಯಾಯಿತಿ ನೀಡಿರುವುದು ನರೇಂದ್ರ ಮೋದಿ ಸರಕಾರಕ್ಕೆ ರೈತರ ಬಗ್ಗೆ ಇರುವ ತಾತ್ಸರ ಮನೋಭಾವವಾಗಿದೆ. ರೈತರು ಇಂತಹ ಕಾರ್ಯಕ್ರಮಗಳನ್ನು ತಿರಸ್ಕರಿಸುವ ಮೂಲಕ ಸರಕಾರಗಳಿಗೆ ಎಚ್ಚರಿಕೆ ನೀಡಲು ತಯಾರಾಗಬೇಕು.
-ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ, ರಾಜ್ಯ ರೈತ ಸಂಘ