ಟ್ರ್ಯಾಕ್ಟರ್ ಢಿಕ್ಕಿ: ಬೈಕ್‍ನಲ್ಲಿ ತೆರಳುತ್ತಿದ್ದ ತಂದೆ, ಮಗಳು ಸಾವು
ಶಿವಮೊಗ್ಗ, ಫೆ. 1: ವೇಗವಾಗಿ ಆಗಮಿಸಿದ ಟ್ರ್ಯಾಕ್ಟರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದ ಶಿಕಾರಿಪುರ-ಹೊನ್ನಾಳ್ಳಿ ರಸ್ತೆಯಲ್ಲಿ ನಡೆದಿದೆ.
ಪರಮೇಶಿ (30) ಹಾಗೂ ಆತನ ಪುತ್ರಿ ರಕ್ಷಿತಾ (5) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ, ಮಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪರಮೇಶಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾಹನವೊಂದರಲ್ಲಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ತರುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ.
ಬೈಕ್ ಗೆ ಢಿಕ್ಕಿಯಾದ ನಂತರ ವಾಹನ ನಿಲ್ಲಿಸದೆ ಟ್ರ್ಯಾಕ್ಟರ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕ, ನಿರ್ಲಕ್ಷದ ಚಾಲನೆಯಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ರವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.