ನನಗೆ ಏನಾದರೂ ಆದರೆ ಮೋದಿ ಹೊಣೆ: ಅಣ್ಣಾ ಹಜಾರೆ

Update: 2019-02-03 07:22 GMT

ಹೊಸದಿಲ್ಲಿ, ಫೆ.3: "ನನಗೆ ಏನಾದರೂ ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಜನ ಹೊಣೆಗಾರನನ್ನಾಗಿ ಮಾಡುತ್ತಾರೆ" ಎಂದು ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.

ಲೋಕಪಾಲ ಮತ್ತು ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಹಜಾರೆ (81)ಯವರ ಅನಿರ್ದಿಷ್ಟಾವಧಿ ಉಪವಾಸ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎಎನ್‍ಐ ಜತೆ ಮಾತನಾಡಿದ ಅವರು, "ಪರಿಸ್ಥಿತಿಯನ್ನು ನಿಭಾಯಿಸಿದ ವ್ಯಕ್ತಿಯಾಗಿ ಜನ ನನ್ನನ್ನು ಸ್ಮರಿಸಿಕೊಳ್ಳುತ್ತಾರೆಯೇ ವಿನಃ ಬೆಂಕಿಗೆ ತುಪ್ಪ ಸುರಿದ ವ್ಯಕ್ತಿಯಾಗಿ ನೋಡುವುದಿಲ್ಲ. ನನಗೆ ಏನಾದರೂ ಆದರೆ ಜನ, ಪ್ರಧಾನಿ ಮೋದಿಯನ್ನು ಹೊಣೆಗಾರನನ್ನಾಗಿ ಮಾಡುತ್ತಾರೆ" ಎಂದು ಹೇಳಿದರು.

ಜನ ಆಂದೋಲನ ಸತ್ಯಾಗ್ರಹ ಬ್ಯಾನರ್‍ ನಡಿ ಅಣ್ಣಾ ಹಜಾರೆ ಜನವರಿ 30ರಂದು ತಮ್ಮ ರಲೇಗಾಂವ್ ಸಿದ್ಧಿ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಕೇಂದ್ರದಲ್ಲಿ ಲೋಕಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಆರಂಭಿಸುವಂತೆ ಹಜಾರೆ ಆಗ್ರಹಿಸಿದ್ದು, ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆರಂಭಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿದ್ದಾರೆ.

"ಲೋಕಪಾಲ ವ್ಯವಸ್ಥೆಯಲ್ಲಿ ಜನ ಸೂಕ್ತ ಪುರಾವೆಗಳೊಂದಿಗೆ ದೂರು ನೀಡಿದರೆ ಪ್ರಧಾನಿಯನ್ನು ಕೂಡಾ ವಿಚಾರಣೆಗೆ ಗುರಿಪಡಿಸಲು ಅವಕಾಶವಿದೆ. ಅಂತೆಯೇ ಲೋಕಾಯುಕ್ತ ವ್ಯವಸ್ಥೆ, ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವಿರುದ್ಧವೂ ತನಿಖೆ ನಡೆಸಬಹುದಾಗಿದೆ. ಈ ಕಾರಣದಿಂದ ಅವರಿಗೆ ಈ ವ್ಯವಸ್ಥೆ ಬೇಕಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News