ಪದ್ಮಶ್ರೀ ಪುರಸ್ಕಾರ ಹಿಂದಿರುಗಿಸಲಿರುವ ಹಿರಿಯ ಮಣಿಪುರಿ ಚಿತ್ರ ನಿರ್ದೇಶಕ

Update: 2019-02-03 16:27 GMT

ಹೊಸದಿಲ್ಲಿ, ಫೆ.3: ಕೇಂದ್ರ ಸರಕಾರದ ಪೌರತ್ವ ಮಸೂದೆಯನ್ನು ವಿರೋಧಿಸಿ ಹಿರಿಯ ಮಣಿಪುರಿ ಚಿತ್ರ ನಿರ್ದೇಶಕ ಅರಿಬಾಮ್ ಶ್ಯಾಂ ಶರ್ಮಾ 2006ರಲ್ಲಿ ಪ್ರದಾನಿಸಲಾದ ಪದ್ಮಶ್ರೀ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ನೆರೆಯ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡುವ ಪ್ರಸ್ತಾವನೆಗೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಪ್ರಸ್ತಾವನೆ ಮುಸ್ಲಿಮರ ವಿರೋಧಿ ಮನಸ್ಥಿತಿಯದ್ದಾಗಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ಮತಗಳನ್ನು ಸೆಳೆಯಲು ಕೇಂದ್ರ ಸರಕಾರ ನಡೆಸಿರುವ ಹುನ್ನಾರ ಎಂದು ಹಲವರು ಆರೋಪಿಸಿದ್ದಾರೆ.

ಹಿಂದುಗಳು, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡುವಂತೆ 1955ರ ಕಾನೂನಿಗೆ ತಿದ್ದುಪಡಿ ತರುವ ಉದ್ದೇಶದಿಂದ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಬಯಸಿದೆ. ಕೇಂದ್ರದ ನಿರ್ಧಾರಕ್ಕೆ ಬಹುತೇಕ ಈಶಾನ್ಯ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು ಈಗಾಗಲೇ ಅನೇಕ ಪ್ರತಿಭಟನೆಗಳು ನಡೆದಿವೆ.

ರವಿವಾರ ಇಂಪಾಲಾದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ 83ರ ಹರೆಯದ ಶರ್ಮಾ, ಮಣಿಪುರದ ಜನರಿಗೆ ರಕ್ಷಣೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಸರಕಾರ ಈಶಾನ್ಯ ಭಾಗವನ್ನು ಮತ್ತು ರಾಜ್ಯಗಳನ್ನು ಗಾತ್ರ ಮತ್ತು ಜನಸಂಖ್ಯೆಯನ್ನು ಪರಿಗಣಿಸದೆ ಗೌರವಿಸಬೇಕು ಎಂದು ಅವರು ತಿಳಿಸಿದ್ದಾರೆ. ಲೋಕಸಭೆಯಲ್ಲಿ ಜನವರಿ 8ರಂದು ಅಂಗೀಕಾರ ಪಡೆದ ಪೌರತ್ವ ಮಸೂದೆಯ ವಿರುದ್ಧ ಮಣಿಪುರದಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ. ಬಿಜೆಪಿಯ ಮಿತ್ರಪಕ್ಷಗಳೂ ಸೇರಿದಂತೆ ಇಲ್ಲಿನ ಹತ್ತು ರಾಜಕೀಯ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ.

ಈಶಾನ್ಯ ಭಾಗದ ಮೂಲಜನರಿಗೆ ರಕ್ಷಣೆಯನ್ನು ಒದಗಿಸುವ ನಿಬಂಧನೆಯನ್ನು ಸೇರಿಸದಿದ್ದರೆ ಈ ಮಸೂದೆಯನ್ನು ವಿರೋಧಿಸುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News