×
Ad

ನಮ್ಮ ಭಾಷಣಗಳು ಹೃದಯಗಳನ್ನು ಒಡೆಯುವಂತೆ ಇರಬಾರದು: ಎಸ್.ಬಿ.ಮಹಮ್ಮದ್ ದಾರಿಮಿ

Update: 2019-02-03 18:16 IST

ಮೈಸೂರು,ಫೆ.3: ನಾವು ಮಾಡುವ ಭಾಷಣಗಳು ಹೃದಯಗಳನ್ನು ಬೆಸೆಯುವಂತೆ ಇರಬೇಕೇ ಹೊರತು ಹೃದಯಗಳನ್ನು ಒಡಯುವಂತೆ ಇರಬಾರದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕೇಂದ್ರ ಜಮಾ ಮಸೀದಿಯ ಎಸ್.ಬಿ.ಮಹಮ್ಮದ್ ದಾರಿಮಿ ಹೇಳಿದರು.

ಮೈಸೂರಿನ ನಂಜನಗೂಡು ತಾಲೂಕು ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀಶಿರಾತ್ರೀಶ್ವರ ಭಗವತ್ಪಾದರ ಜಾತ್ರಾ ಮಹೋತ್ಸವದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡಿದರು. 'ನಾವು ಮಾತನಾಡುವಾಗ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾತನಾಡಬೇಕು. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಯಾರು ಮಾಡಬಾರದು. ಬಸವಣ್ಣನವರು ಹೇಳಿದ ವಚನಗಳು ಎಲ್ಲಾ ಧರ್ಮಗಳಲ್ಲೂ ಇದೆ. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ತತ್ವವನ್ನು ಅನುಸರಿಸಬೇಕೆ ಹೊರತು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.

ತಮ್ಮ ಧರ್ಮವನ್ನು ಅನುಸರಿಸಿ ಬೇರೆಯ ಧರ್ಮವನ್ನು ಗೌರವಿಸುವುದೇ ಮನುಷ್ಯತ್ವ, ಆ ನಿಟ್ಟಿನಲ್ಲಿ ನಾವುಗಳು ನಡೆಯಬೇಕಿದೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಗೌರವಿಸುವ ಗುಣ ಇದೆ. ಸೌದಿ ರಾಷ್ಟ್ರಗಳಿಗೆ ಹೋದರೆ ಖುರಾನ್‍ಅನ್ನೆ ಅಲ್ಲಿ ಪ್ರಚಾರ ಮಾಡುವ ಹಾಗಿಲ್ಲ. ಆದರೆ ನಮ್ಮ ದೇಶದಲ್ಲಿ ಕುರಾನ್, ಬೈಬಲ್, ಭಗವದ್ಗೀತೆಯನ್ನು ಪ್ರಚಾರ ಮಾಡಬಹುದು. ಅಂತಹ ಸರ್ವಶ್ರೇಷ್ಠ ರಾಷ್ಟ್ರ ನಮ್ಮದು, ಇಲ್ಲಿ ಯಾರನ್ನೂ ನಾವು ಟೀಕಿಸುವ ಮನೋಭಾವ ಹೊಂದಿಲ್ಲ. ನಾವೆಲ್ಲರೂ ಒಂದೇ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದೇವೆ. ನಮ್ಮನ್ನು ಎನ್.ಡಿ.ಎ ಪರೀಕ್ಷೆಗೆ ಒಳಪಡಿಸಿದರೆ ಅನಂತ್‍ ಕುಮಾರ್ ಹೆಗಡೆಯಾದಿಯಾಗಿ ನಮ್ಮ ಪೂರ್ವಜರೆಲ್ಲಾ ಒಂದೇ ಎಂಬುದು ತಿಳಿಯಲಿದೆ. ನಾವೆಲ್ಲಾ ಭಾರತೀಯರು, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿ, ಹುಬ್ಬಳ್ಳಿಯ ವರೂರು ನವಗ್ರಹ ತೀರ್ಥ ಕ್ಷೇತ್ರದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಶುಭಸಂದೇಶ ನೀಡಿದರು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ವಿಧಾನಸಭಾಸದಸ್ಯ ಅಮರೇಗೌಡ ಬಯ್ಯಾಪುರ, ಕ್ಯಾಥೊಲಿಕ್ ಧರ್ಮಗುರು ರೆ.ಲೆಸ್ಲಿ ಮೊರಾಸ್, ಡಾ.ಶರತಶ್ಚಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News