ಯಡಿಯೂರಪ್ಪ ಭಾಗವಹಿಸಿದ್ದ ಸಮಾರಂಭಕ್ಕೆ ಮುತ್ತಿಗೆ ಯತ್ನ: ಎನ್‍ಎಸ್‍ಯುಐ ಕಾರ್ಯಕರ್ತರ ಬಂಧನ

Update: 2019-02-03 17:17 GMT

ಶಿವಮೊಗ್ಗ, ಫೆ. 3: 'ಆಪರೇಷನ್ ಕಮಲ'ದ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ಬಿ.ಎಸ್.ಯಡಿಯೂರಪ್ಪ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಎನ್‍ಎಸ್‍ಯುಐ ಕಾರ್ಯಕರ್ತರು ಭಾನುವಾರ ಸಂಜೆ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿ ಯಡಿಯೂರಪ್ಪ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು.

ಶಿವಮೊಗ್ಗ - ಯಶವಂತಪುರ ಜನ ಶತಾಬ್ದಿ ರೈಲು ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆಯಿತು. ಬಿ.ಎಸ್.ಯಡಿಯೂರಪ್ಪರವರು ಕಾರ್ಯಕ್ರಮದ ಉದ್ಘಾಟನೆಗೆ ಮುಂದಾಗುತ್ತಿದ್ದಂತೆ, ದಿಢೀರ್ ಆಗಿ ಸಮಾರಂಭ ಸ್ಥಳಕ್ಕೆ ಆಗಮಿಸಿದ ಎನ್‍ಎಸ್‍ಯುಐ ಕಾರ್ಯಕರ್ತರು ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗುತ್ತಾ, ವೇದಿಕೆ ಬಳಿ ಆಗಮಿಸಲೆತ್ನಿಸಿದರು.

ಅಲ್ಲಿಯೇ ಇದ್ದ ಪೊಲೀಸರು ಕಾರ್ಯಕರ್ತರನ್ನು ಮುಂದಕ್ಕೆ ಹೋಗದಂತೆ ತಡೆದು, ಹಿಂದಕ್ಕೆ ಕಳುಹಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕೂಡ ಎನ್‍ಎಸ್‍ಯುಐ ಕಾರ್ಯಕರ್ತರ ವಿರುದ್ಧ ಹಾಗೂ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಪರವಾಗಿ ಘೋಷಣೆ ಕೂಗಲಾರಂಭಿಸಿದರು.

ಎರಡು ಕಡೆಯ ಕಾರ್ಯಕರ್ತರು ಪರಸ್ಪರ ಮುಖಾಮುಖಿಯಾಗಿ ಪರ - ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರಿಂದ, ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ-ಗೊಂದಲದ ವಾತಾವರಣ ನೆಲೆಸಿತ್ತು. ಎನ್‍ಎಸ್‍ಯುಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಘಟಕದ ಶಿವಮೊಗ್ಗ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂಧನ್, ಎನ್‍ಎಸ್‍ಯುಐ ಸಂಘಟನೆಯ ರಾಜ್ಯ ಮುಖಂಡ ಕೆ. ಚೇತನ್, ಜಿಲ್ಲಾ ಮುಖಂಡರಾದ ವಿನಯ್ ತಾಂಡಲೆ, ಪುರಲೆ ಮಂಜುನಾಥ ಸೇರಿದಂತೆ ಮೊದಲಾದವರಿದ್ದರು.

ಬಿಜೆಪಿಗೆ ಅಧಿಕಾರ ದಾಹ : ಮುಖಂಡ ಸಿ.ಜಿ.ಮಧುಸೂಧನ್

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಉತ್ತಮ ಆಡಳಿತ ನೀಡುತ್ತಿದೆ. ಆದರೆ ಅಧಿಕಾರ ದಾಹದಿಂದ ಬಿಜೆಪಿ ಪಕ್ಷವು ಸರ್ಕಾರ ಅಸ್ಥಿರಕ್ಕೆ ಯತ್ನಿಸುತ್ತಿದೆ. ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿಗೆ ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಬಿಜೆಪಿಯ ಈ ಕ್ರಮದ ವಿರುದ್ದ ಸಂಘಟನೆಯಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು' ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂಧನ್‍ರವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News