ಲೋಕಸಭೆ ಚುನಾವಣೆ: ರಾಜ್ಯದಲ್ಲಿ 22 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು- ಯಡಿಯೂರಪ್ಪ
ಶಿವಮೊಗ್ಗ, ಫೆ. 3: ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ರಾಜ್ಯದಲ್ಲಿ 22 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸಂಜೆ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿ ರೈಲ್ವೆ ಇಲಾಖೆ ಆಯೋಜಿಸಿದ್ದ 'ಶಿವಮೊಗ್ಗ - ಯಶವಂತಪುರ' ಜನಶತಾಬ್ದಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ಧೇಶಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಆಡಳಿತಕ್ಕೆ ರಾಜ್ಯ ಮಾತ್ರವಲ್ಲದೆ ಇಡೀ ದೇಶಾದ್ಯಂತ ಜನ ಬೆಂಬಲ ವ್ಯಕ್ತವಾಗುತ್ತಿದೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಭಿಲಾಷೆ ಜನರದ್ದಾಗಿದೆ. ಈ ಕಾರಣದಿಂದ ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಅತ್ಯದಿಕ ಸ್ಥಾನ ಗಳಿಸಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಪ್ರಥಮ: ರಾಜ್ಯದಲ್ಲಿ ರೈಲ್ವೆ ವಲಯ ಬೆಳವಣಿಗೆಗೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ, ದೇಶದಲ್ಲಿಯೇ ಪ್ರಥಮ ಬಾರಿಗೆ ಸಹಭಾಗಿತ್ವದ ಯೋಜನೆ ಜಾರಿಗೊಳಿಸಿದ್ದೆ. ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವ ಹೊಸ ರೈಲ್ವೆ ಯೋಜನೆಗಳಿಗೆ ಶೇ. 50 ರಷ್ಟು ಅನುದಾನ ನೀಡುವ ಒಪ್ಪಂದವನ್ನು ಕೇಂದ್ರ ಸರ್ಕಾರದೊಂದಿಗೆ ಮಾಡಿಕೊಳ್ಳಲಾಗಿತ್ತು. ಇದರಿಂದ ಹತ್ತು ಹಲವು ರೈಲ್ವೆ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳುವಂತಾಯಿತು ಎಂದು ತಿಳಿಸಿದರು.
ಈ ಹಿಂದೆ ಶಿವಮೊಗ್ಗ ನಗರಕ್ಕೆ ಕೇವಲ ಐದಾರು ಬಾರಿ ರೈಲುಗಳು ಬಂದು ಹೋಗುತ್ತಿದ್ದವು. ಪ್ರಸ್ತುತ 22 ಕ್ಕೂ ಅಧಿಕ ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿವೆ ಎಂದರೆ ಅದಕ್ಕೆ ಸಂಸದ ಬಿ.ವೈ.ರಾಘವೇಂದ್ರರವರ ಶ್ರಮ ಮುಖ್ಯ ಕಾರಣವಾಗಿದೆ. ಅವರ ಕಾರ್ಯತತ್ಪರತೆಯಿಂದ ಶಿವಮೊಗ್ಗ ಕ್ಷೇತ್ರದಲ್ಲಿ ರೈಲ್ವೆ ವಲಯ ಬೆಳವಣಿಗೆ ಹೊಂದುತ್ತಿದೆ ಎಂದರು.
ಅಭಿವೃದ್ದಿಯಾಗಬೇಕು: ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಹೊಸದಾಗಿ ಹೊರ ವರ್ತುಲ ರಸ್ತೆ ನಿರ್ಮಾಣದ ಯೋಜನೆ ರೂಪಿಸಿದ್ದೆ. ಆದರೆ ಅದು ಇಲ್ಲಿಯವರೆಗೂ ಅನುಷ್ಠಾನಗೊಂಡಿಲ್ಲ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಮನಹರಿಸುತ್ತೇನೆ. ಸಂಬಂಧಿಸಿದವರ ಜೊತೆ ಸಮಾಲೋಚನೆ ನಡೆಸುತ್ತೇನೆ. ಹಾಗೆಯೇ ಹಳೇ ಕಾರಾಗೃಹ ಆವರಣದ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆಗೆ ನೀಡಬಾರದು. ಈ ಕುರಿತಂತೆ ಗೃಹ ಸಚಿವರ ಜೊತೆ ಈಗಾಗಲೇ ಚರ್ಚೆ ನಡೆಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ವಿಧಾನಪರಿಷತ್ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಲತಾ ಗಣೇಶ್, ಉಪ ಮೇಯರ್ ಚೆನ್ನಬಸಪ್ಪ, ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್, ಡಿ.ಆರ್.ಎಂ. ಅಪರ್ಣಾ ಗರ್ಗ್ ಸೇರಿದಂತೆ ಮೊದಲಾದವರಿದ್ದರು.