ಗೋಣಿಬೀಡು ಬಾಲಕಿ ಆತ್ಮಹತ್ಯೆ ಪ್ರಕರಣ: ಇಬ್ಬರು ಯುವಕರ ಬಂಧನ

Update: 2019-02-03 17:37 GMT

ಚಿಕ್ಕಮಗಳೂರು, ಫೆ.3: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಚಕ್ಕುಡಿಗೆ ಗ್ರಾಮದಲ್ಲಿ ಇತ್ತೀಚೆಗೆ ಬಾಲಕೀಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಕಿಯ ಆತ್ಮಹತ್ಯೆ ಘಟನೆ ಸಂಬಂಧ ಆಕೆಯ ಪೋಷಕರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕಿ ಆತ್ಮಹತ್ಯೆಗೆ ಇಬ್ಬರು ಯುವಕರು ಕಾರಣ ಎಂಬುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಣಿಬೀಡು ಠಾಣಾ ವ್ಯಾಪ್ತಿಯ ಚಕ್ಕುಡಿಗೆ ಗ್ರಾಮದಲ್ಲಿ ಕಳೆದ ಜ.27ರಂದು 15 ವರ್ಷದ ಬಾಲಕಿಯೋರ್ವಳು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆ ಸಂಬಂಧ ಆಕೆಯ ಕುಟುಂಬದವರು ಅನುಮಾನ ವ್ಯಕ್ತಪಡಿಸಿ ಬಾಲಕಿ ಸಾವಿನ ಹಿಂದೆ ಕಾಣದ ಕೈಗಳಿರುವ ಬಗ್ಗೆ ಆರೋಪಿಸಿ ತನಿಖೆ ಕೈಗೊಳ್ಳುವಂತೆ ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಾಲಕಿ ಆತ್ಮಹತ್ಯೆಗೆ ಇಬ್ಬರು ಯುವಕರು ನೀಡಿದ ಕಿರುಕುಳವೇ ಕಾರಣ ಎಂಬುದನ್ನು ಪತ್ತೆ ಹಚ್ಚಿದ್ದು, ಘಟನೆ ಸಂಬಂಧ ಚಕ್ಕುಡಿಗೆ ಗ್ರಾಮದ ನವೀನ್(20) ಹಾಗೂ ಮರೇಬೈಲು ಗ್ರಾಮದ 17 ವರ್ಷದ ಬಾಲಕನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಜ.27ರಂದು ಚಕ್ಕುಡಿಗೆ ಗ್ರಾಮದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಅದೇ ಗ್ರಾಮದ ನವೀನ್ ಎಂಬಾತ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಬಾಲಕಿ ನವೀನನ ಪ್ರೀತಿಯನ್ನು ನಿರಾಕರಿಸಿದ್ದರೂ ಆತನ ಮಾತ್ರ ತನ್ನನ್ನು ಪ್ರೀತಿಸುವಂತೆ ಪದೇ ಪದೇ ಬಾಲಕಿಗೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ನವೀನನ ಒಮ್ಮುಖ ಪ್ರೀತಿಯ ವಿಚಾರವು ಬಾಲಕಿಯ ಕುಟುಂಬದವರಿಗೆ ಹಾಗೂ ನವೀನನ ಪೋಷಕರಿಗೂ ತಿಳಿದು ಕುಟುಂಬಸ್ಥರು ನವೀನನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ. 

ಈ ಮಧ್ಯೆ ಮೃತ ಬಾಲಕಿ ಮನೆಯ ಸಮೀಪದಲ್ಲಿ ಕೆಲಸಕ್ಕೆಂದು ಬಂದಿದ್ದ 17 ವರ್ಷದ ಬಾಲಕನೊಬ್ಬ ನವೀನ ಪ್ರೀತಿಸುತ್ತಿದ್ದ ಬಾಲಕಿಯನ್ನು ನೋಡಿ ಪ್ರೀತಿಸುವಂತೆ ಪದೇ ಪದೇ ಬಾಲಕಿಯನ್ನು ಸತಾಯಿಸುತ್ತಿದ್ದ. ಆದರೆ ಇದಕ್ಕೆ ಸೊಪ್ಪು ಹಾಕದ ಬಾಲಕಿ ಈತನ ಪ್ರೇಮ ನಿವೇದನೆಯನ್ನೂ ತಿರಸ್ಕರಿಸಿದ್ದಳು ಎಂದು ತಿಳಿದು ಬಂದಿದೆ. ಆದರೆ ಜ.27ರಂದು ಮಧ್ಯಾಹ್ನದ ವೇಳೆ ಬಾಲಕಿಯ ಮನೆಗೆ ಬಂದಿದ್ದ ಈ ಬಾಲಕ ತನ್ನನ್ನು ಪ್ರೀತಿಸಲೇ ಬೇಕು. ತಪ್ಪಿದಲ್ಲಿ ದೈಹಿಕ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿ ತೆರಳಿದ್ದ ಎನ್ನಲಾಗಿದೆ.

ತಾನು ಪ್ರೀತಿಸುತ್ತಿದ್ದವಳ ಹಿಂದೆ ಮತ್ತೋರ್ವ ಬೆನ್ನು ಬಿದ್ದಿರುವ ವಿಷಯ ತಿಳಿದ ನವೀನ್ ಅದೇ ದಿನ ಬಾಲಕಿ ಮನೆಗೆ ಬಂದು ತನ್ನನ್ನೇ ಪ್ರೀತಿಸಬೇಕೆಂದು ಗದರಿಸಿದ್ದ ಎಂದು ತಿಳಿದು ಬಂದಿದೆ. ಈ ಇಬ್ಬರು ಪ್ರೇಮಿಗಳ ಕಿರುಕುಳದಿಂದ ನೊಂದು ಕೊಂಡ ಬಾಲಕಿ ಅದೇ ದಿನ ಮಧ್ಯಾಹ್ನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಇಬ್ಬರು ಆರೋಪಿಗಳು ತಮ್ಮ ಪ್ರೇಮ ಪುರಾಣದ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿದ್ದು, ಬಾಲಕಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ 17 ವರ್ಷದ ಬಾಲಪರಾಧಿಯನ್ನು ಸದ್ಯ ಬಾಲ ನ್ಯಾಯ ಮಂಡಳಿ ವಶಕ್ಕೊಪ್ಪಿಸಲಾಗಿದ್ದು, ನವೀನನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News