ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ: ಸಚಿವ ಸತೀಶ್ ಜಾರಕಿಹೊಳಿ

Update: 2019-02-03 18:10 GMT

ದಾವಣಗೆರೆ,ಫೆ.3: ಕಾಂಗ್ರೆಸ್‍ನ ಯಾವೊಬ್ಬ ಶಾಸಕರೂ ಎಲ್ಲಿಯೂ ಹೋಗಿಲ್ಲ. 20 ಶಾಸಕರು ರಾಜ್ಯದಲ್ಲಿಯೇ ಇದ್ದಾರೆ. ಮೈತ್ರಿ ಸರ್ಕಾರ 5 ವರ್ಷ ಪೂರ್ಣಗೊಳಿಸುತ್ತದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕೆಲವೊಂದು ವ್ಯವಸ್ಥೆ ಸರಿಯಿಲ್ಲ, ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆಯುತ್ತಿದ್ದು, ಇತ್ತೀಚಿಗೆ ಪಿಡಬ್ಲ್ಯೂಡಿ ಮತ್ತು ನೀರಾವರಿ ಇಲಾಖೆಗೆ ಅನುದಾನ ಮಂಜೂರು ಮಾಡಲಾಗಿದೆ. ಮೋಡ ಕವಿದಾಗ ಗುಡುಗು ಸಾಮಾನ್ಯ. ಅದನ್ನು ಸರಿ ಪಡಿಸಿಕೊಂಡು ಹೋಗ್ತೀವಿ ಎಂದರು.

ನನ್ನ ಸಹೋದರ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ದೊರೆತಿಲ್ಲ. ಆದರೆ, ಅವರು ಪಕ್ಷದಲ್ಲಿರುವುದಾಗಿ ಪತ್ರ ಬರೆದುಕೊಟ್ಟಿದ್ದಾರೆ. ಹಾಗಾಗಿ, ಅವರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದ ಅವರು, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ರಾಜಕಾರಣಿಯಾಗುವ ಪ್ರತಿಯೊಬ್ಬರಿಗೆ ಈ ಆಸೆ ಇದ್ದೇ ಇರುತ್ತದೆ. ಆದರೆ, ಅದಕ್ಕೆ ಈ ಅವಧಿ ಸರಿಯಲ್ಲ, ಕಾಲ ಕೂಡಿಬಂದಾಗ ಆಗುತ್ತೇನೆ. ಅಲ್ಲದೆ, ನಮ್ಮ ಸಮುದಾಯದವರೂ ಸಿಎಂ ಆಗಬೇಕು. ಅದಕ್ಕಾಗಿ ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಗಣೇಶ್ ಹಲ್ಲೆ ಪ್ರಕರಣ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತಿದ್ದು, ಇದರಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು? ಎಂಬುದು ನಂತರ ತಿಳಿಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News