ದಿ.ಎಂ.ವಿ.ಕೃಷ್ಣಪ್ಪ ಬರದ ಜಿಲ್ಲೆಗೆ ಬದುಕು ನೀಡಿದ ಹರಿಕಾರ: ಎಸ್.ಎಂ.ಕೃಷ್ಣ

Update: 2019-02-03 18:26 GMT

ಕೋಲಾರ, ಫೆ.3: ಬರದ ಜಿಲ್ಲೆಗಳಲ್ಲಿ ಜನರಿಗೆ ಬದುಕು ನೀಡಿದ ಹೈನೋದ್ಯಮದ ಇಂದಿನ ಔನತ್ಯವನ್ನು ಕ್ರೀರಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪ ಅವರಿಗೆ ಸಮರ್ಪಣೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟರು.

ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಗೋಪೂಜೆ ಹಾಗೂ ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುವ ಪೀಳಿಗೆಯ ರಾಜಕಾರಣಿಗಳಿಗೆ ಎಂವಿ.ಕೆ ಅವರ ಹಾಸ್ಯದ ತುಣುಕುಗಳಿರುವ ಭಾಷಣ ಓದುವಂತೆ ಸಲಹೆ ನೀಡಿದ ಅವರು, ಹಾಸ್ಯ ಪ್ರವೃತ್ತಿಯ ಮೂಲಕವೇ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದ ಕೃಷ್ಣಪ್ಪ ರಾಜಕಾರಣಿಗಳಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು. ಸ್ಪೂರ್ತಿಯ ಚಿಲುಮೆಯಾಗಿ ಯುವಶಕ್ತಿಯ ಅವಧೂತರಾಗಿ ರಾಜಕಾರಣಕ್ಕೆ ಬಂದ ಎಂವಿಕೆ ವರ್ಣರಂಜಿತ ವ್ಯಕ್ತಿತ್ವ ಸ್ಮರಿಸುವ ಸಂದರ್ಭ ನನಗೆ ಬಂದಿದ್ದು, ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಬಿ.ಕೃಷ್ಣಭೈರೇಗೌಡ ಮಾತನಾಡಿ, ರಾಜ್ಯದ 12 ಜಿಲ್ಲೆಗಳಲ್ಲಿ ಲಾಲ್‌ಬಹುದ್ದೂರು ಶಾಸ್ತ್ರಿ ಅವರನ್ನು ಕರೆಸಿ ಹಾಲು ಒಕ್ಕೂಟಗಳನ್ನು ಉದ್ಘಾಟಿಸಿದ ಎಂ.ವಿ.ಕೆ ಅವರು ಕೆಸಿ ರೆಡ್ಡಿ ನಂತರ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದರು. ಆದರೆ ಸ್ವಲ್ಪ ದರಲ್ಲಿ ತಪ್ಪಿ ಹೋಯಿತು ಎಂದರು. ಸ್ವೀಕರ್ ರಮೇಶ್ ಕುಮಾರ್ ಮಾತನಾಡಿ, ಅಖಂಡ ಕರ್ನಾಟಕದ ಭೂಪಟದಲ್ಲಿ ಶಾಪಗ್ರಸ್ಥ ಬೌಗೋಳಿಕ ಪ್ರದೇಶ, ನದಿ, ಜಲಾಶಯಗಳಿಲ್ಲದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಬದುಕು ನೀಡಿದವರು ಎಂ.ವಿ.ಕೃಷ್ಣಪ್ಪ ಎಂದರು.
 
ಗ್ರಾಮಗಳ ಹೆಣ್ಣುಮಕ್ಕಳು ಇಂದು ಸ್ವಾಭಿಮಾನದ ಬದುಕು ಕಾಣಲು ಹೈನೋದ್ಯಮ ಮಾತ್ರ ಕಾರಣವಾಗಿದೆ. ತಿಂಗಳಿಗೆ 100 ಕೋಟಿ ರೂ., ವರ್ಷಕ್ಕೆ 1,300 ಕೋಟಿ ರೂ.ಗಳ ಬಟವಾಡೆಯಾಗುತ್ತದೆ. ಇಂತಹ ಆರ್ಥಿಕ ಉತ್ಪತ್ತಿಯನ್ನು ಯಾವ ಆರ್ಥಿಕ ತಜ್ಞರಿಂದಲೂ ತರಿಸಲು ಸಾಧ್ಯವಿಲ್ಲ ಎಂದರು. ಮಾಜಿ ಪ್ರಧಾನಿ ದೇವೇಗೌಡರು ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಲಾಗದೇ ಕಳುಹಿಸಿದ್ದ ಸಂದೇಶವನ್ನು ಸಚಿವ ಸಿ.ಬಿ.ಕೃಷ್ಣಭೈರೇಗೌಡ ವಾಚಿಸಿದರು.

ಇದೇ ಸಂದರ್ಭದಲ್ಲಿ ಎಂ.ವಿ.ಕೃಷ್ಣಪ್ಪ ಅವರ ಧರ್ಮಪತ್ನಿ ಪ್ರಮೀಳಾ ಕೃಷ್ಣಪ್ಪ ಅವರನ್ನು ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿದ್ದ ಸಹಸ್ರಾರು ಮಂದಿಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಊಟದ ವ್ಯವಸ್ಥೆ ಮಾಡಿದ್ದರು. ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.

‘ಸಿದ್ದರಾಮಯ್ಯನವರಿಗೂ, ನನಗೂ ಭಿನ್ನಾಭಿಪ್ರಾಯವಿಲ್ಲ’

ವೇದಿಕೆಯಲ್ಲಿ ಎಸ್.ಎಂ.ಕಷ್ಣ, ಸಿದ್ದರಾಮಯ್ಯ, ಪ್ರಮೀಳ ಎಂ.ವಿ.ಕೃಷ್ಣಪ್ಪ ಅವರಿಗೆ ಮಾತ್ರ ಮೂರು ಆಸನಗಳನ್ನು ದೂರ ದೂರ ಹಾಕಲಾಗಿತ್ತು. ಇದನ್ನು ಕಂಡ ಎಸ್.ಎಂ.ಕೃಷ್ಣ, ಕಾವೇರಿ ಸಮಸ್ಯೆಯ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದಿಲ್ಲಿಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಸಂದರ್ಭದಲ್ಲಿ ಎಲ್ಲರೂ ದೂರ ದೂರ ಕುಳಿತ ಸಂದರ್ಭವನ್ನು ನೆನಪು ಮಾಡಿಕೊಂಡರು. ಇಂತಹ ಪರಿಸ್ಥಿತಿ ಬೇಡ. ಆಸನಗಳನ್ನು ಹತ್ತಿರವಾಗಿಸಿ. ಸಿದ್ದರಾಮಯ್ಯರೊಂದಿಗೆ ನಾನು ಮಾತನಾಡುತ್ತೇನೆ. ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯವಿಲ್ಲ ಎಂದು ಎಸ್.ಎಂ.ಕೃಷ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News