ಮುಸ್ಲಿಮರು ಹೇಗಿರಬೇಕು ಎಂಬುದನ್ನು ಶರೀಅತ್ ನಿರ್ಧರಿಸುತ್ತದೆಯೇ ಹೊರತು, ರಾಜಕಾರಣಿಗಳಲ್ಲ: ಶಾಫಿ ಸಅದಿ

Update: 2019-02-04 14:51 GMT

ಬೆಂಗಳೂರು, ಫೆ.4: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ. ಒಂದು ವೇಳೆ ಯಾರಾದರೂ ಮತ ಹಾಕಿದರೆ ಅವರು ಮುಸ್ಲಿಮರೇ ಅಲ್ಲ’ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡಿದೆ.

"ಮುಸ್ಲಿಮರು ಯಾರು? ಅವರು ಹೇಗಿರಬೇಕು ಎಂಬುದನ್ನು ಶರೀಅತ್ ತೀರ್ಮಾನ ಮಾಡುತ್ತದೆಯೇ ಹೊರತು, ರಾಜಕಾರಣಿಗಳಲ್ಲ ಎಂದು ಕರ್ನಾಟಕ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಈ ಬಗ್ಗೆ ಸಚಿವರು ಸ್ಪಷ್ಟೀಕರಣ ನೀಡಬೇಕು. ನಾನು ಅವರೊಂದಿಗೆ ಈ ವಿಚಾರದ ಕುರಿತು ಮಾತನಾಡುತ್ತೇನೆ. ಒಂದು ವೇಳೆ ಅವರು ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದ್ದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಇವರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಮುಸ್ಲಿಮರು ಯಾರು? ಅವರು ಹೇಗಿರಬೇಕು ಎಂಬುದನ್ನು ಶರೀಅತ್ ತೀರ್ಮಾನ ಮಾಡುತ್ತದೆಯೇ ಹೊರತು, ರಾಜಕಾರಣಿಗಳಲ್ಲ ಎಂದು ಅವರು ಹೇಳಿದ್ದಾರೆ.

ತೀವ್ರ ಅಸಮಾಧಾನ: ಧರ್ಮ ವೈಯಕ್ತಿಕವಾದದ್ದು, ಮತದಾನ ಸಂವಿಧಾನ ಬದ್ಧವಾದ ಹಕ್ಕು. ಅದನ್ನು ಯಾವ ರೀತಿ ಬಳಸಬೇಕೆಂದು ಜಾಗೃತಿ ಮೂಡಿಸುವ ಬದಲು, ಸಮಾಜದಲ್ಲಿನ ಸಾಮರಸ್ಯಕ್ಕೆ ಹುಳಿ ಹಿಂಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಪ್ರತಿಪಕ್ಷ ಬಿಜೆಪಿ, ಸಾಮಾಜಿಕ ಜಾಲತಾಣಗಳ ಬಳಕೆದಾರರು, ಧಾರ್ಮಿಕ ಮುಖಂಡರು ಸಚಿವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಆಕ್ರೋಶ: 'ಜಾತ್ಯತೀತತೆ ಕುರಿತು ಬೊಳಗೆ ಬಿಡುವುದನ್ನು ಅಭ್ಯಾಸ ಮಾಡಿಕೊಂಡಿರುವ ಕಾಂಗ್ರೆಸ್ ನೇತಾರರಿಗೆ ಬಿಜೆಪಿ ಬಗ್ಗೆ ಯಾವ ಮಟ್ಟದ ಭಯವಿದೆ ಎನ್ನವುದು ಇದರಿಂದ ಅರ್ಥವಾಗುತ್ತದೆ. ಸ್ವಾತಂತ್ರ ನಂತರ ದೇಶದ ಜನರನ್ನು ವಂಚಿಸಿರುವ ಕಾಂಗ್ರೆಸ್ ನಾಯಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಮುಸ್ಲಿಮ್ ಬಾಂಧವರಿಗೆ ತಮ್ಮ ನಿಜವಾದ ಹಿತರಕ್ಷಣೆ ಮಾಡುವವರು ಯಾರು ಎನ್ನವುದು ಅರ್ಥವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.

ಸ್ವಾತಂತ್ರ ನಂತರ ಮುಸ್ಲಿಮರ ಏಳಿಗೆಗೆ ಕಾಂಗ್ರೆಸ್ ಮಾಡಿರುವುದೇನು ಎಂದು ಈಗ ಮುಸಲ್ಮಾನರೇ ಪ್ರಶ್ನಿಸುತ್ತಿದ್ದಾರೆ. ಸಚಿವ ಝಮೀರ್‌ ಅಹ್ಮದ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ನಾಯಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

ಝಮೀರ್‌ ಅಹ್ಮದ್ ಹೇಳಿದ್ದೇನು?: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ. ಒಂದು ವೇಳೆ ಯಾರಾದರೂ ಮತ ಹಾಕಿದರೆ ಅವರು ಮುಸ್ಲಿಮರೇ ಅಲ್ಲ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದರೆ, ಜಾತ್ಯತೀತ ಭಾರತೀಯರು ಆತಂಕದ ವಾತಾವರಣದಲ್ಲಿ ಇರಬೇಕಾಗುತ್ತದೆ. ಹೀಗೆ, ಆಗಬಾರದು ಎನ್ನುವುದು ಎಲ್ಲರ ಆಶಯವಾಗಿದ್ದು, ಮುಸ್ಲಿಮರು ಬಿಜೆಪಿಗೆ ಮಾತ್ರ ಮತ ಹಾಕಬಾರದು. ಜಾತ್ಯತೀತ ಪಕ್ಷಗಳಿಗೆ ಮಾತ್ರ ಮತ ನೀಡಿ ಎಂದು ಸಚಿವ ಝಮೀರ್‌ ಅಹ್ಮದ್‌ ಖಾನ್ ಹೇಳಿದ್ದರು.

ಪ್ರತಿಯೊಬ್ಬ ಮುಸಲ್ಮಾನ ಕಡ್ಡಾಯವಾಗಿ ಮತ ಚಲಾವಣೆ ಮಾಡಬೇಕು. ಒಂದೊಂದು ಲೋಕಸಭೆ ಕ್ಷೇತ್ರದಲ್ಲೂ 3ರಿಂದ 5 ಲಕ್ಷವರೆಗೂ ಮುಸ್ಲಿಮರ ಮತಗಳಿವೆ. ರಾಜ್ಯದಲ್ಲಿ ಇಪ್ಪತ್ತಕ್ಕೂ ಅಧಿಕ ಸೀಟುಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಮುಂಬರುವ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ದಿಕ್ಸೂಚಿಯಾಗಿದೆ ಎಂದು ಹೇಳಿದ್ದರು.

ಭಾರತದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಕ್ಕಿರುವುದು ಕಾನೂನು ಹಾಗೂ ಸಂವಿಧಾನ ಬದ್ಧವಾಗಿ. ಇಲ್ಲಿ ಯಾವುದೇ ಧರ್ಮದ ಆಧಾರದಲ್ಲಿ ಮತದಾನಕ್ಕೆ ಅವಕಾಶ ಸಿಕ್ಕಿಲ್ಲ ಅನ್ನೋದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಸಚಿವರು ರಾಜಕೀಯವಾದ ಹೇಳಿಕೆಯನ್ನು ನೀಡಿರಬಹುದು. ಆದರೆ, ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸುವವರಿಗೆ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ನೀಡಿದರೆ, ನೀವು ಆ ಧರ್ಮದ ಅನುಯಾಯಿಗಳಲ್ಲ ಎಂದು ಹೇಳುವ ಅಧಿಕಾರವನ್ನು ಯಾರೂ ಯಾರಿಗೂ ಕೊಟ್ಟಿಲ್ಲ.

-ಮುಫ್ತಿ ಬಾಖರ್ ಅರ್ಶದ್, ರಾಜ್ಯಾಧ್ಯಕ್ಷ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್

ಯಾರಿಗೆ ಮತದಾನ ಮಾಡಬೇಕು ಎಂಬುದು ಅರ್ಹ ಮತದಾರನ ವೈಯಕ್ತಿಕ ನಿರ್ಧಾರ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆ ಹೊರತು, ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ವಿಚಾರಗಳನ್ನು ಕಡೆಗಣಿಸುವುದು ಉತ್ತಮ. ಸಮುದಾಯದವರಾಗಲಿ, ಜನ ಸಾಮಾನ್ಯರಾಗಲಿ ಯಾರೂ ಕೂಡ ಈ ಹೇಳಿಕೆಯನ್ನು ಒಪ್ಪುವುದಿಲ್ಲ. ಮುಸಲ್ಮಾನ ಯಾರು? ಆತ ಹೇಗಿರಬೇಕು ಎಂಬುದನ್ನು ಇಸ್ಲಾಮ್ ಧರ್ಮ ಹೇಳುತ್ತದೆ ಎಂಬುದನ್ನು ಮರೆಯಬಾರದು.

-ಅಥರುಲ್ಲಾ ಶರೀಫ್, ರಾಜ್ಯಾಧ್ಯಕ್ಷ, ಜಮಾಅತೆ ಇಸ್ಲಾಮಿ ಹಿಂದ್

ಇದುವರೆಗೆ ಕಾಂಗ್ರೆಸ್ ಪಕ್ಷ ಮುಸ್ಲಿಮರ ಪರವಾಗಿ ಒಂದು ಕೆಲಸವನ್ನು ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಆಡಳಿತದಲ್ಲೆ ಮುಸ್ಲಿಮರ ಪರಿಸ್ಥಿತಿ ದಲಿತರಿಗಿಂತ ಹೀನಾಯ ವಾಗಿದೆ ಎಂಬುದು ನ್ಯಾ.ಸಾಚಾರ್ ವರದಿ ತಿಳಿಸಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ, ಕಾಂಗ್ರೆಸ್ ಮುಸ್ಲಿಮರ ಪಕ್ಷವಲ್ಲ ಎಂದಿದ್ದರು. ಸಮುದಾಯದ ಪರವಾಗಿ ಕೆಲಸ ಮಾಡಲು ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆಯೇ ಹೊರತು, ಕಾಂಗ್ರೆಸ್‌ ಪಕ್ಷವನ್ನು ಬೆಳೆಸಲು ಅಲ್ಲ. ಸಮುದಾಯದಲ್ಲಿ ಈಗಾಗಲೆ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ಅಕ್ರಮ ಬಂಧನದಲ್ಲಿರುವ ಅಮಾಯಕರನ್ನು ಬಿಡುಗಡೆ ಮಾಡುವುದನ್ನು ಬಿಟ್ಟು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಲ್ಲ ಎಂದರೆ ನೀವು ಮುಸ್ಲಿಮರಲ್ಲ ಎಂದರೆ, ಇದೊಂದು ಫತ್ವಾ ರೀತಿಯಲ್ಲಿದೆ. ಇಸ್ಲಾಮ್ ಧರ್ಮವನ್ನು ಯಾವ ರೀತಿ ಅನುಸರಿಸಬೇಕು ಎಂಬುದನ್ನು ಧಾರ್ಮಿಕ ಮುಖಂಡರು ಮಾರ್ಗದರ್ಶನ ಮಾಡುತ್ತಾರೆ. ಇವರಿಂದ ಕಲಿಯುವಂತದ್ದು ಏನು ಇಲ್ಲ.

ಮುಂದಿನ ದಿನಗಳಲ್ಲಿ ಸಮುದಾಯದ ಶ್ರೇಯೋಭಿವೃದ್ಧಿಗೆ ಬೇಕಿರುವ ಕೆಲಸವನ್ನು ಮಾಡುವುದು ಬಿಟ್ಟು, ಇಂತಹ ಅವೈಜ್ಞಾನಿಕವಾದ ಹೇಳಿಕೆಗಳನ್ನು ನೀಡುವುದನ್ನು ಸಚಿವರು ಈ ಕೂಡಲೆ ನಿಲ್ಲಿಸಬೇಕು. ಸುವರ್ಣ ಚಾನೆಲ್‌ನಲ್ಲಿ ಪ್ರವಾದಿ ನಿಂದನೆ ಮಾಡಿದ ಅಜಿತ್ ಹನುಮಕ್ಕನವರ್ ವಿರುದ್ಧ ಮಾತನಾಡದವರು, ಈ ವಿಚಾರದಲ್ಲಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ.

-ಎ.ಜೆ.ಖಾನ್, ರಾಜ್ಯಾಧ್ಯಕ್ಷ, ದಲಿತ ಮತ್ತು ಮೈನಾರಿಟಿಸ್ ಸೇನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News