ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಎಚ್.ಡಿ.ರೇವಣ್ಣ
ಕಲಬುರ್ಗಿ/ಬೆಂಗಳೂರು, ಫೆ.4: ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ 4,500 ಕೋಟಿ ಪರಿಹಾರ ಕೊಟ್ಟರೆ, ರಾಜ್ಯಕ್ಕೆ 931 ಕೋಟಿ ಮಾತ್ರ ಕೊಟ್ಟಿದೆ. ಈ ವಿಷಯದಲ್ಲಿ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಸೋಮವಾರ ಕಲಬುರ್ಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಜ್ಯದ ಹಿತಕ್ಕಿಂತ ಅಧಿಕಾರ ಮುಖ್ಯವಾಗಿದೆ. ಆರು ತಿಂಗಳಿನಿಂದ ಸರಕಾರ ಬೀಳಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಬರ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ 4,500 ಕೋಟಿ ಪರಿಹಾರ ಕೊಟ್ಟರೆ, ರಾಜ್ಯಕ್ಕೆ 931 ಕೋಟಿ ಮಾತ್ರ ಕೊಟ್ಟಿದೆ. ಈ ವಿಷಯದಲ್ಲಿ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು.
ಸರಕಾರ ಐದು ವರ್ಷ ಖಂಡಿತ ಇರುತ್ತದೆ. ಬಿ.ಎಸ್.ಯಡಿಯೂರಪ್ಪಗೆ ಸರಕಾರ ಉರುಳಿಸಲು ಆಗಲಿಲ್ಲ. ಹೀಗಾಗಿ ಸುಮ್ಮನಾಗಿದ್ದಾರೆ. ಇದೀಗ ಆರ್.ಅಶೋಕ್ ಅವರನ್ನು ಮುಂದೆ ಬಿಟ್ಟಿದ್ದಾರೆ. ಅಲ್ಲದೆ, ಫೆ.8 ರಂದು ಬಜೆಟ್ ಮಂಡನೆ ಮಾಡುತ್ತೇವೆ. ಈ ಬಾರಿಯ ಬಜೆಟ್ ಕೂಡ ರೈತ ಪರ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಗೆದ್ದಿದ್ದಾರೆ. ಹೀಗಾಗಿ, ಈ ಕ್ಷೇತ್ರದ ಅಭ್ಯರ್ಥಿ ಸಂಬಂಧ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ರೇವಣ್ಣ ತಿಳಿಸಿದರು.
ನನ್ನ ಮಗ ಪ್ರಜ್ವಲ್ ಹಿಂಬಾಗಿನಿಲಿಂದ ಹೋಗಿಲ್ಲ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸೂಚಿಸಿದರೆ ನನ್ನ ಪುತ್ರ ಸ್ಪರ್ಧಿಸುತ್ತಾನೆ ಎಂದ ಅವರು, ಲೋಕಸಭೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡ ಹಾಗೂ ಇತರ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದು ನುಡಿದರು.