ಅಕ್ರಮ ಮರಳು ಸಾಗಾಣೆ ದಂಧೆ: ಲಾರಿ ಸಮೇತ ಪೊಲೀಸ್ ಪೇದೆಯನ್ನು ಹಿಡಿದುಕೊಟ್ಟ ಗ್ರಾಮಸ್ಥರು
ತೀರ್ಥಹಳ್ಳಿ, ಫೆ. 4: ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಲಾರಿಯಲ್ಲಿದ್ದ ಪೊಲೀಸ್ ಪೇದೆಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಕುತೂಹಲಕಾರಿ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ.
ಈ ಸಂಬಂಧ ಶಿವಮೊಗ್ಗದ ಪೊಲೀಸ್ ಠಾಣೆಯೊಂದರ ಪೇದೆ, ಲಾರಿ ಮಾಲಕ, ಚಾಲಕ ಹಾಗೂ ಮರಳು ಲೋಡ್ ಕೆಲಸಕ್ಕೆ ತೆರಳಿದ್ದ ಕಾರ್ಮಿಕರಿಬ್ಬರ ವಿರುದ್ದ ಮಾಳೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೆ ಅಕ್ರಮ ಮರಳು ಸಾಗಾಣೆ ದಂಧೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸ್ ಹೆಡ್ ಕಾನ್‍ಸ್ಟೇಬಲ್‍ವೊಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದ ಪೊಲೀಸರ ಬಲೆಗೆ ಬಿದ್ದಿದ್ದರು. ಈ ಪ್ರಕರಣದಲ್ಲಿ ಶಿವಮೊಗ್ಗ ಉಪ ವಿಭಾಗದ ಡಿವೈಎಸ್‍ಪಿ, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಸಬ್ ಇನ್ಸ್‍ಪೆಕ್ಟರ್ ವಿರುದ್ದ ಎ.ಸಿ.ಬಿ. ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು.
ಈ ಪ್ರಕರಣ ಇನ್ನೂ ಸಾರ್ವಜನಿಕರ ಮನದಲ್ಲಿ ಹಚ್ಚ ಹಸಿರಾಗಿರುವ ಬೆನ್ನಲ್ಲೆ, ಲಾರಿಯಲ್ಲಿ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಪೊಲೀಸ್ ಪೇದೆಯನ್ನು ಗ್ರಾಮಸ್ಥರೇ ಹಿಡಿದು ಸಮೀಪದ ಪೊಲೀಸ್ ಠಾಣೆಗೆ ನೀಡಿರುವುದು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಮುಜುಗಕ್ಕೀಡಾಗುವಂತೆ ಮಾಡಿದೆ.
ಘಟನೆ ಹಿನ್ನೆಲೆ: ಹೊಳೆಕೊಪ್ಪ ಗ್ರಾಮದ ತುಂಗಾನದಿ ತೀರದಿಂದ, ಅನೇಕ ದಿನಗಳಿಂದ ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿರುವ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಅದರಂತೆ ಶನಿವಾರ ಮರಳು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದನ್ನು ಗ್ರಾಮಸ್ಥರು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಈ ವೇಳೆ ಲಾರಿಯಲ್ಲಿ ಪೊಲೀಸ್ ಪೇದೆಯಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ತಕ್ಷಣವೇ ಗ್ರಾಮಸ್ಥರು ಪೊಲೀಸ್ ಪೇದೆ, ಲಾರಿ ಚಾಲಕ, ಮರಳು ಲೋಡ್ ಮಾಡುವ ಕಾರ್ಮಿಕರನ್ನು ಹಿಡಿದಿದ್ದಾರೆ. ಮಾಳೂರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿ, ಅವರ ವಶಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.