ಗಾಂಧೀ ಪ್ರತಿಕೃತಿಗೆ ಗುಂಡಿಕ್ಕಿ ಸಂಭ್ರಮಾಚರಣೆ: ಹಿಂದೂ ಮಹಾಸಭಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-02-04 17:23 GMT

ಶಿವಮೊಗ್ಗ, ಫೆ. 4: ಹುತಾತ್ಮ ದಿನಾಚರಣೆಯಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಪ್ರತಿಕೃತಿಗೆ ಪಿಸ್ತೂಲ್ ತೋರಿಸಿ ಸಂಭ್ರಮಾಚರಣೆ ನಡೆಸಿ ದೇಶಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶ ಆಲಿಗಢದಲ್ಲಿನ ಹಿಂದೂ ಮಹಾಸಭಾ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ. 

ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಹಿಂದೂ ಮಹಾಸಭಾ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಗಾಂಧಿಜೀಯವರಿಗೆ ಅಪಮಾನಿಸುವ ಮೂಲಕ ಇಡೀ ದೇಶಕ್ಕೆ ಅವಮಾನಗೊಳಿಸಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಹೀನ ಕೃತ್ಯ: ಮಹಾತ್ಮ ಗಾಂಧಿಜೀ ಹತ್ಯೆಯಾದ ಜ. 30 ನ್ನು ದೇಶಾದ್ಯಂತ ಹುತಾತ್ಮ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅಗಲಿದ ಮಹಾತ್ಮನನ್ನು ನೆನೆದು ಶೋಕ ವ್ಯಕ್ತಪಡಿಸಲಾಗುತ್ತದೆ. ಈ ಮೂಲಕ ಮಹಾನ್ ಚೇತನಕ್ಕೆ ದೇಶವಾಸಿಗಳು ಗೌರವ ಅರ್ಪಿಸುವ ಕಾರ್ಯ ನಡೆಸುತ್ತಾರೆ. 
ಆದರೆ ಉತ್ತರ ಪ್ರದೇಶ ರಾಜ್ಯದ ಆಲಿಘಡದ ಹಿಂದೂ ಮಹಾಸಭಾದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು, ನಕಲಿ ಬಂದೂಕಿನಿಂದ ರಾಷ್ಟ್ರಪಿತ ಗಾಂಧಿಜೀಯವರ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡುವುದನ್ನು ಮರುಸೃಷ್ಟಿಸಿದ್ದಾರೆ. ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಹುತಾತ್ಮ ದಿನವನ್ನು ಶೌರ್ಯ ದಿನವೆಂದು ಆಚರಿಸಿ, ಸಂಭ್ರಮಾಚರಣೆ ನಡೆಸಿದ್ದಾರೆ. ಇದೊಂದು ಹೀನ ಕೃತ್ಯವಾಗಿದೆ. ಇಡೀ ದೇಶವೇ ತಲೆತಗ್ಗಿಸುವ ರೀತಿಯಲ್ಲಿ ನಡೆದುಕೊಂಡಿದ್ಧಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾತ್ಮ ಗಾಂಧಿಜೀಯವರಿಗೆ ಅಪಮಾನ ಎಸಗಿ, ದೇಶ ತಲೆತಗ್ಗಿಸುವ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮುಖಂಡರಾದ ಪ್ರಸನ್ನಕುಮಾರ್, ವಿಶ್ವನಾಥ್ ಕಾಶಿ, ಕೆ. ರಂಗನಾಥ್, ಸಿ.ಜಿ.ಮಧುಸೂದನ್, ಬಿ. ರಘು, ಗಿರೀಶ್, ಕೆ. ಚೇತನ್, ಕಿರಣ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News