ಕೇಂದ್ರ ಬಜೆಟ್: ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ- ಜೆಡಿಎಸ್ ಮುಖಂಡ ದೇವರಾಜ್ ಟೀಕೆ

Update: 2019-02-04 17:31 GMT

ಚಿಕ್ಕಮಗಳೂರು, ಫೆ.4: ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದ್ದು, ದೇಶಕ್ಕೆ ಅನ್ನನೀಡುವ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ನೀಡುವ ರೈತರಿಗೆ ನೀಡುವ ಯೋಜನೆಯಲ್ಲಿ ಬಜೆಟ್‍ನಲ್ಲಿ ಘೋಷಿಸುವ ಮೂಲಕ ಕೇಂದ್ರ ಸರಕಾರ ರೈತರನ್ನು ಭಿಕ್ಷುಕರೆಂದು ಭಾವಿಸಿದಂತಾಗಿದೆ. ಜನಪರವಾಗಿರದ ಈ ಬಜೆಟ್ ದೇಶದ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸಿರುವ ಜನವಿರೋಧಿ ಬಜೆಟ್ ಆಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಟೀಕಿಸಿದ್ದಾರೆ.  

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣೆ ಸಂದರ್ಭ ದೇಶದ ಜನರಿಗೆ ಸಾಕಷ್ಟು ಜನಪರವಾದ ಭರವಸೆಗಳನ್ನು ನೀಡಿತು. ಇದರಿಂದಾಗಿ ದೇಶದ ಜನರು ಮೋದಿ ಅವರನ್ನು ದೇವರೆಂಬಂತೆ ನೋಡಿದರು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹಾಗೂ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲಾಗಿದ್ದು, ಮೋದಿ ಸರಕಾರವನ್ನು ಸುಳ್ಳು ಭರವಸೆಗಳ ಸರಕಾರ ಎಂದು ಜರಿಯುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸರಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ಜನಸಾಮಾನ್ಯರನ್ನು ಕಡೆಗಣಿಸಿದ್ದು, ಕೇವಲ ಬಂಡವಾಳಿಶಾಹಿಗಳ ಪರವಾದ ಬಜೆಟ್ ಮಂಡಿಸುವ ಮೂಲಕ ಬಿಜೆಪಿ ಶ್ರೀಮಂತರ ಪರ ಎಂಬುದನ್ನು ರುಜುವಾತು ಮಾಡಿದೆ ಎಂದು ಅವರ ಆರೋಪಿಸಿದರು. 

ಕೇಂದ್ರದ ಬಜೆಟ್‍ನಲ್ಲಿ ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂ. ಹಾಕುವುದಾಗಿ ತಿಳಿಸಿದ್ದಾರೆ. ಇದರಂತೆ ಓರ್ವ ರೈತನಿಗೆ ಪ್ರತಿದಿನಕ್ಕೆ 17 ರೂ. ನಿಗದಿಪಡಿಸಲಾಗಿದೆ. ಆದರೆ ಈ ಹಣ ರೈತರಿಗೆ ಬೀಡಿ ಬೆಂಕಿಪಟ್ಟಣ ಖರೀದಿಸಲೂ ಸಾಲುವುದಿಲ್ಲ. ರೈತರು ಈ ದೇಶದ ಬೆನ್ನೆಲುಬಾಗಿದ್ದಾರೆ. ಅವರಿಗೆ ದಿನಕ್ಕೆ 17 ರೂ. ನೀಡುವುದು ಭಿಕ್ಷೆ ನೀಡುವುದಕ್ಕೆ ಸಮನಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರೇನು ಕೇಂದ್ರ ಬಳಿ ಭಿಕ್ಷೆ ಬೇಡುತ್ತಿಲ್ಲ. ಕೃಷಿ ಕ್ಷೇತ್ರದ ಸುಧಾರಣೆ ಬಯಸುತ್ತಿದ್ದಾರೆ. ಮೋದಿ ಸರಕಾರ ಕೃಷಿ ಸಲಕರಣೆ, ಗೊಬ್ಬರ, ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ನೀಡುವುದನ್ನು ಬಯಸಿದ್ದರು, ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ, ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಬಯಸಿದ್ದರು. ಆದರೆ ಕೇಂದ್ರ ಸರಕಾರ ಇಂತಹ ಯಾವುದೇ ರೈತ ಪರವಾದ ಯೋಜನೆಗಳನ್ನು ಬಜೆಟ್‍ನಲ್ಲಿ ಘೋಷಣೆ ಮಾಡದೇ 17 ರೂ. ನೀಡುವುದಾಗಿ ಘೋಷಣೆ ಮಾಡಿ ಇಡೀ ರೈತ ಸಮುದಾಯವನ್ನು ಭಿಕ್ಷುಕರೆಂಬಂತೆ ಬಿಂಬಿಸಿದೆ ಎಂದು ದೇವರಾಜ್ ಟೀಕಿಸಿದರು.

ಬಿಜೆಪಿಯವರಿಗೆ ರೈತರ ಮೇಲೆ ಕಿಂಚಿತ್ ಕಾಳಜಿ ಇಲ್ಲ ಎಂಬುದನ್ನು ಈ ಬಜೆಟ್ ಸಾಕ್ಷಾತ್ಕಾರ ಮಾಡಿಸಿದೆ. ಬಿಜೆಪಿಯವರ ರೈತಪರ ಕಾಳಜಿ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ. ಅವರಿಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿ ಎಂದು ಸವಾಲೆಸೆದ ಅವರು, ಈ ಬಜೆಟ್ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿದ ಬಜೆಟ್ ಆಗಿದ್ದು, ಸುಳ್ಳು ಭರವಸೆಗಳ ಬಜೆಟ್ ಇದಾಗಿದೆ. ಬಜೆಟ್‍ನಲ್ಲಿ ದೇಶದ ಅಭಿವೃದ್ಧಿಗೆ ಯಾವುದೇ ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಿಲ್ಲ ಎಂದರು. 

ಇದೊಂದು ಜನವಿರೋಧಿ ಬಜೆಟ್‍ಯಾಗಿದ್ದು, ಅಸಂಘಟಿತ ಕಾರ್ಮಿಕರಿಗೆ ಸಮಾನವೇತನ ಬೇಡಿಕೆ ಈಡೇರಿಸುವ ಸಂಬಂಧ ಬಜೆಟ್‍ನಲ್ಲಿ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಜಾಸ್ತಿ ಮಾಡಿದಂತೆ ಬಜೆಟ್‍ನಲ್ಲಿ ಬಿಂಬಿಸಲಾಗಿದೆಯಾದರೂ ಅಂಗನವಾಡಿ ಕಾರ್ಯಕರ್ತೆಯರ ವೇತನದಲ್ಲಿ ರಾಜ್ಯ ಸರಕಾರದ ಪಾಲು ಹೆಚ್ಚಿದ್ದು, ಕೇಂದ್ರ ಕೂಡುಗೆ ಏನೂ ಇಲ್ಲ ಎಂದ ಅವರು, ಬಜೆಟ್‍ನ್ನು ಸಂಪೂರ್ಣವಾಗಿ ಅವಲೋಕಿಸಿದಾಗ ಕೈಗಾರಿಕೋದ್ಯಮಿಗಳಿಗೆ ತೃಪ್ತಿ ತರುವಂತ ಪ್ಲಾನ್ ಮಾಡಿದ್ದಾರೆ. ರೈತರು ಮತ್ತು ಕಾರ್ಮಿಕರಿಗೆ ಮತ್ತೆ ಮಂಕುಬೂದಿ ಎರಚಿದ್ದಾರೆ. ಮೋದಿ ಅವರು ಉತ್ತಮ ಬಜೆಟ್ ನೀಡಿದ್ದಾರೆ ಎಂದು ನಕಲಿ ದೇಶಭಕ್ತರು ಮಾತ್ರ ಬೀಗುತ್ತಿದ್ದಾರೆ. ನೈಜ ದೇಶಭಕ್ತರು ಈ ಬಜೆಟ್ ಅನ್ನು ಜನವಿರೋಧಿ ಎಂದು ತೆಗಳುತ್ತಿದ್ದಾರೆ. ಕೇಂದ್ರ ಬಜೆಟ್ ನಕಲಿ ದೇಶಭಕ್ತರಿಗೆ ತೃಪ್ತಿ ತಂದಿದೆ. ನಿಜವಾದ ದೇಶ ಭಕ್ತರಿಗೆ ತೃಪ್ತಿತಂದಿಲ್ಲ. ಇದಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಜನತೆ ತಕ್ಕ ಉತ್ತರ ನೀಡಲಿದ್ದು, ಬಿಜೆಪಿ ಕಾರ್ಯಕರ್ತರು  ದೇಶದ ಅಭಿವೃದ್ಧಿ ಪರ ಬಜೆಟ್ ನೀಡಿದ್ದಾರೆ ಎಂದು ಹಾಡಿಹೊಗಳುತ್ತಿದ್ದಾರೆ. ಆದರೆ ಇದು ಜನವಿರೋಧಿ ಬಜೆಟ್ ಎಂಬ ಬಗ್ಗೆ ತಾನು ಚರ್ಚೆಗೆ ಸಿದ್ಧ ಎಂದ ಅವರು, ಬಿಜೆಪಿಯವರಿಗೆ ತಾಕತ್ತಿದ್ದರೆ ಸೂಕ್ತ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಎಂ.ಡಿ.ರಮೇಶ್, ಜೈರಾಜ್ ಅರಸ್, ಸಯ್ಯದ್ ಝಮೀಲ್ ಅಹ್ಮದ್, ಮಂಜಪ್ಪ, ಚಂದ್ರಪ್ಪ ಉಪಸ್ಥಿತರಿದ್ದರು.

ಶೋಭಾ ಕರಂದ್ಲಾಜೆ ನಿಷ್ಕ್ರಿಯ ಸಂಸದೆ: ಸಂಸದೆ ಶೋಭಾ ಕರಂದ್ಲಾಜೆ ಅವರು ಅಪರೇಷನ್ ಕಮಲದಲ್ಲಿ ವೀರವೇಶದಿಂದ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ತುದಿಗಾಗಲ್ಲಿ ನಿಂತಿದ್ದಾರೆ. ಚಿಕ್ಕಮಗಳೂರು ಜನತೆ ಅವರನ್ನು ಆರಿಸಿ ಕಳಿಸಿರುವುದು ಅಪರೇಷನ್ ಕಮಲ ಮಾಡಲು ಅಥವಾ ಯಡಿಯೂರಪ್ಪ ಅವರಿಂದ ಶಹಬಾಸ್ ಗಿರಿಪಡೆದುಕೊಳ್ಳಲು ಅಲ್ಲ. ರಾಜ್ಯ ಸರಕಾರ ಸತ್ತು ಹೋಗಿದೆ ಎಂದು ಹೇಳುವ ಅವರು ಕೇಂದ್ರ ಸರಕಾರ ಏನು ಮಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬಜೆಟ್‍ನಲ್ಲಿ ಕೇಂದ್ರ ನೀಡಿರುವ ಯೋಜನೆಗಳೇನು? ಕಾಫಿ ಉದ್ಯಮಕ್ಕೆ ನೀಡಿದ ಕೊಡುಗೆ ಏನೆಂಬುದನ್ನು ಸಂಸದೆ ಶೋಭಾ ಜನರಿಗೆ ಹೇಳಬೇಕು. 
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News