ಗೋಡ್ಸೆ ಸಂತತಿಗಳಿಂದ ದೇಶಕ್ಕೆ ಗಂಡಾಂತರ: ಮಾಜಿ ಸಚಿವೆ ಮೋಟಮ್ಮ

Update: 2019-02-04 17:57 GMT

ಚಿಕ್ಕಮಗಳೂರು,ಫೆ.5: ಗಾಂಧಿಯ ಶಾಂತಿ ಮಂತ್ರವನ್ನು ಭಾರತ ಮಾತ್ರವಲ್ಲದೇ ಇಡೀ ಪ್ರಪಂಚವೇ ಒಪ್ಪಿದೆ. ವಿಶ್ವ ಸಂಸ್ಥೆ ಕೂಡ ಗಾಂಧಿಜಿಯವರ ತತ್ವಕ್ಕೆ ಮಾನ್ಯತೆ ನೀಡಿದೆ. ಇಂತಹ ತತ್ವವನ್ನು ಮುಗಿಸಲು ಹೊರಟಿರುವವರಿಗೆ ಇಡೀ ದೇಶವೇ ಧಿಕ್ಕಾರ ಹೇಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷೆ ಹಾಗೂ ಮಾಜಿ ಮಂತ್ರಿ ಮೋಟಮ್ಮ ಕರೆ ನೀಡಿದರು.

ಸೋಮವಾರ ಜಿಲ್ಲಾ ಕಾಂಗ್ರೆಸ್ ಪಕ್ಷ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ಧರಣಿಯಲ್ಲಿ ಬಾಗವಹಿಸಿ ಮಾತನಾಡಿದ ಅವರು, ವಿಭಿನ್ನ ಭಾಷೆ, ಬದುಕು ಮತ್ತು ಸಂಸೃತಿಗಳನ್ನು ಹೊಂದಿರುವ ಭಾರತ ಸುಖದಿಂದ ಇರಲು ಬಿಡದ ಇಂತಹ ಕೊಲ್ಲುವ ಸಂಸ್ಕೃತಿಯ ಗೋಡ್ಸೆ ಸಂತತಿಗಳಿಂದ ದೇಶಕ್ಕೆ ಗಂಡಾಂತರ ಕಾದಿದೆ. ಇಂತಹವರ ಚಟುವಟಿಕೆಗಳನ್ನು ಹಾಗೂ ಇವರಿಗೆ ಬೆಂಬಲ ನೀಡುವ ಪಕ್ಷಗಳನ್ನು ಜನರು ತಿರಸ್ಕರಿಸಬೇಕಿದೆ ಎಂದರು. 

ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾದವರು ಎಂದೇಳಿಕೊಳ್ಳುವ ಪೂಜಾ ಪಾಂಡೆ ಎಂಬವವರು ಆಟಿಕೆ ಪಿಸ್ತೂಲಿನಿಂದ ಗಾಂಧಿ ಪ್ರತಿಮೆಗೆ ಗುಂಡು ಹಾರಿಸಿ ವಿಕೃತ ಮನೋಭಾವನೆ ತೋರಿದ್ದಾರೆ. ಇದು ಅಕ್ಷಮ್ಯ ಅಪರಾಧ. ಅಲ್ಲದೆ ಗಾಂಧಿಯನ್ನು ಕೊಂದ ನಾಥೋರಾಮ್ ಗೋಡ್ಸೆ ಚಿತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕೊಲ್ಲುವ ಸಂಸೃತಿಗೆ ಪ್ರೇರಣೆ ಮಾಡುತ್ತಿರುವುದು ಖಂಡನೀಯ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್ ವಿಜಯಕುಮಾರ್ ಮಾತನಡಿ, ಸದ್ಭಾವನ ದಿನಾಚರಣೆಯಂದು ದೇಶದ ಆಲಿಘಡದಲ್ಲಿ ವಿಶ್ವಹಿಂದು ಮಹಾಸಭಾದ ನಾಯಕಿ ಮಹಾತ್ಮ ಗಾಂಧಿ ಪ್ರತಿಮೆಗೆ ಗುಂಡು ಹಾರಿಸುವ ಮೂಲಕ ಗಾಂಧಿ ತತ್ವಕ್ಕೆ ಅವಮಾನ ಮಾಡಿದ್ದಾರೆ. ಸಂಘಪರಿವಾರದ ಈ ಸಂಸ್ಕೃತಿ ವಿಕೃತ ಸಂಸ್ಕೃತಿಯ ಪರಮಾವಧಿಯಾಗಿದ್ದು, ಹಿಂಸೆಗೆ ಪ್ರಚೋದನೆ ನೀಡುವ ಸಂಘಗಳನ್ನು ನಿಷೇಧಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್‍ಮೂರ್ತಿ ಮಾತನಾಡಿ, ಇಡೀ ದೇಶವನ್ನು ಅಶಾಂತಿಯತ್ತ ಕೊಂಡೊಯ್ಯುವ ಕೆಲಸದಲ್ಲಿ ನರೇಂದ್ರ ಮೋದಿ ಮತ್ತವರ ತಂಡ ಕಾತುರದಿಂದ ಕಾಲು ಕೆರೆದು ನಿಂತಿದೆ. ಮುಂಬರುವ ಲೋಕಸಭಾ ಚುನಾವಣೆ ಮೊದಲು ಅವರು ಇಂತಹ ಕೆಲಸಗಳನ್ನು ಹೆಚ್ಚು ಹೆಚ್ಚು ಮಾಡುತ್ತಾರೆ. ಈ ದೇಶವನ್ನು ಕಾಪಾಡಬೇಕಾದ ಜವಾಬ್ದಾರಿ ಇರುವ ರಾಜಕೀಯ ಪಕ್ಷಗಳು ಮತ್ತು ಜಾತ್ಯಾತೀತ ಮನೋಭಾವವುಳ್ಳ ಸಾರ್ವಜನಿಕರು ಕೂಡ ಒಗ್ಗಟ್ಟಾಗಿ ಇಂತಹ ವಿಕೃತ ಮನಸ್ಸಿನ ಬಿಜೆಪಿಯನ್ನು ಅಧಿಕಾರದಿಂದ ಓಡಿಸಬೇಕು ಎಂದರು.

ಇದಕ್ಕು ಮುನ್ನ ಘಟನೆಯನ್ನು ಖಂಡಿಸಿದ ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿ ಗಾಂಧಿ ಪ್ರತಿಮೆಗೆ ಹಾರ ಹಾಕಿದರು. ನಂತರ ರಘುಪತಿ ರಾಘವ ರಾಜರಾಮ್ ಗೀತೆ ಹೇಳಿ ಧರಣಿ ನಡೆಸಿದರು. ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಪಂ ಮಾಜಿ ಅಧ್ಯಕ್ಷ ಎ.ಎನ್ ಮಹೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತೀಕ್ ಕೈಸರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ವಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಯುವ ಕಾಂಗ್ರೆಸ್‍ನ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News