ಕಾಳು ಮೆಣಸು ಕಳ್ಳತನ ಪ್ರಕರಣ: ಮಾಲು ಸಮೇತ ಆರೋಪಿ ಬಂಧನ

Update: 2019-02-04 18:05 GMT

ಚಿಕ್ಕಮಗಳೂರು, ಫೆ.4: ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂದುವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಕಾಳುಮೆಣಸು ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕಾಳು ಮೆಣಸು ಕಳ್ಳತನ ಮಾಡಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶಿಗ್ಗಾಂವ್ ಮೂಲದ ನಾಗರಾಜ್(26) ಎಂದು ತಿಳಿದು ಬಂದಿದ್ದು, ಆರೋಪಿಯಿಂದ 58 ಸಾವಿರ ರೂ.ಮೌಲ್ಯದ ಕಾಳು ಮೆಣಸು ಹಾಗೂ ಕೃತ್ಯಕ್ಕೆ ಬಳಸಿದ್ದ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಆಲ್ದೂರು ಪಟ್ಟಣ ಸಮೀಪದ ಕೂದುವಳ್ಳಿ ಗ್ರಾಮದಲ್ಲಿರುವ ವೆಸ್ಲಿ ಪಿಂಟೋ ಎಂಬವರ ಲೂಡ್ಜ್ ಎಸ್ಟೇಟಿನ ದಾಸ್ತಾನು ಸಂಗ್ರಹಣಾ ಕೊಠಡಿಯಲ್ಲಿದ್ದ 183 ಕೆಜಿ ಕಾಳು ಮೆಣಸು ಕಳ್ಳತನವಾಗಿತ್ತು. ಈ ಸಂಬಂಧ ವೆಸ್ಲಿ ಅವರು ಆಲ್ದೂರು ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ಎಸ್ಪಿ ಹರೀಶ್ ಪಾಂಡೆ, ಎಎಸ್ಪಿ ಶೃತಿ, ಡಿವೈಎಸ್ಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಕಳ್ಳತನ ಕೃತ್ಯವನ್ನು ಬೇಧಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣೆಯ ಪಿಎಸೈ ರಾಘವೇಂದ್ರ, ಎಎಸ್ಸೈ ಸುಕುಮಾರ್, ಸಿಬ್ಬಂದಿಯಾದ ಸುರೇಶ್, ವಿಶ್ವಾನಾಥ್, ಸ್ವಾಮಿ, ನಾಗರಾಜ್, ಆದರ್ಶ, ಪ್ರಸನ್ನ, ನವೀನ್ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News