ಧರ್ಮದ ಹೆಸರಿನಲ್ಲಿ ಹಿಂಸಾತ್ಮಕ ಕೃತ್ಯ ಸೃಷ್ಟಿಸುವುದು ಸರಿಯಲ್ಲ: ದಿನೇಶ್ ಗುಂಡೂರಾವ್

Update: 2019-02-04 18:17 GMT

ಮೈಸೂರು,ಫೆ.4: ಧರ್ಮದ ಹೆಸರಿನಲ್ಲಿ ಹಿಂಸಾತ್ಮಾಕ ಕೃತ್ಯ ಸೃಷ್ಟಿಮಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಸೋಮವಾರ ಆಗಮಿಸಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿನ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವರು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಉಂಟುಮಾಡಿ ಹಿಂಸೆ ತಂದೊಡ್ಡುತ್ತಿದ್ದಾರೆ. ಎಲ್ಲಾ ಧರ್ಮವನ್ನು ಗೌರವಿಸುವ ಮನೋಭಾವವನ್ನು ನಾವು ಹೊಂದಬೇಕು ಎಂದ ಅವರು, ಇತ್ತೀಚಿಗೆ ಕೇಂದ್ರ ಸಚಿವರೊಬ್ಬರು ತಾಜ್‍ಮಹಲ್ ಮೊದಲು ಶಿವನ ದೇವಾಲಯವಾಗಿತ್ತು ಎಂಬ ಹೇಳಿಕೆ ನೀಡುತ್ತಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ಮತ್ತು ಜನರಲ್ಲಿ ಗೊಂದಲ ಸೃಷ್ಟಿ ಮಾಡಿಸಿವುದೇ ಇವರ ಕೆಲಸ. ಆತ ಬೇಕಾದರೆ ರಾಮ ಸೀತೆಯ ಹೆಸರನ್ನು ಬದಲಾಯಿಸಿ ಬಿಡಬಲ್ಲ ಎಂದು ಲೇವಡಿ ಮಾಡಿದರು.

ಪ್ರಗತಿಪರರು ಎಲ್ಲಾ ಧರ್ಮ ಮತ್ತು ಆಧ್ಯಾತ್ಮಿಕತೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ವ್ಯತಿರಿಕ್ತವಾಗಿ ಹೇಳಿಕೆ ನೀಡುವವರ ವಿರುದ್ಧ ನೇರ ದಾಳಿ ಮಾಡಿ ದೇಶದ್ರೋಹ ಪಟ್ಟ ಕಟ್ಟುತ್ತಾರೆ. ಸಹಿಷ್ಣುತೆ ಕಡಿಮೆಯಾಗುತ್ತಿದೆ. ವೈಷಮ್ಯಕ್ಕೆ ಎಡೆಮಾಡಿಕೊಡಲಾಗುತ್ತಿದೆ. ಇದನ್ನೆಲ್ಲಾ ದೂರ ಮಾಡಿ ಸೃಜನಶೀಲ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.

ಕೃಷಿ ಸಚಿವ ಶಿವಶಂಕರ್ ರೆಡ್ಡಿ ಮಾತನಾಡಿ, ಯೋಜನೆಗಳನ್ನು ಜಾರಿ ಮಾಡಿದಾಕ್ಷಣ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ರಾಜ್ಯವಾರು ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ, ಹಾಗಾಗಿ ರಾಷ್ಟ್ರಮಟ್ಟದಲ್ಲಿ ಒಂದು ಕೃಷಿ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರಾಜ್ಯದ ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಆದರೂ ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಾವು ಉಚಿತ ಪಂಪ್ ಸೆಟ್, ಕೃಷಿಹೊಂಡ, ರೈತರಿಗೆ ಬಡ್ಡಿರಹಿತ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದೇವೆ, ಆದರೂ ರೈತರ ಆತ್ಮಹತ್ಯೆ ತಪ್ಪುತ್ತಿಲ್ಲ. ಕೃಷಿಹೊಂಡಗಳನ್ನು ನಿರ್ಮಾಣ ಮಾಡಿ ಇಸ್ರೇಲ್ ಮಾದರಿಯಲ್ಲಿ ನೀರು ಇಲ್ಲದ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಕನಕಪುರ ಶ್ರೀ ದೇಗುಲ ಮಠದ ಡಾ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಶುಭ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ಶಾಸಕ ಅನಿಲ್ ಕುಮಾರ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News