ನನ್ನ ಬಂಧನ ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ನೇರ ದಾಳಿ : ಆನಂದ್ ತೇಲ್ ತುಂಬ್ಡೆ

Update: 2019-02-05 07:32 GMT

ಮುಂಬೈ, ಫೆ. 5: ''ನನ್ನನ್ನು ಬಂಧಿಸಿದ ಕ್ರಮ ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ'' ಎಂದು  ಗೋವಾ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರೊಫೆಸರ್ ಹಾಗೂ ಖ್ಯಾತ ಹೋರಾಟಗಾರ ಆನಂದ್ ತೇಲ್ ತುಂಬ್ಡೆ ಹೇಳಿದ್ದಾರೆ.

ಮುಂಬೈಯಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ''ಸರಕಾರವೊಂದು ತನ್ನದೇ ನಾಗರಿಕರ ವಿರುದ್ಧ ಸ್ವಾತಂತ್ರ್ಯಾನಂತರ ನಡೆಸಿದ ಅತಿ ದೊಡ್ಡ ಸಂಚು ಇದಾಗಿದೆ,'' ಎಂದು ಹೇಳಿದರು.

''ಸರಕಾರಕ್ಕೆ ನಿರ್ದಿಷ್ಟವಾಗಿ ನನ್ನ ವಿರುದ್ಧ ಏನೂ ಇಲ್ಲ. ಆದರೆ ಅದು ಅಸಮ್ಮತಿಗೆ ವಿರುದ್ಧವಾಗಿದೆ. ಇಂದು ನಾನಾಗಿದ್ದರೆ, ನಾಳೆ ಮತ್ತಿನ್ಯಾರೋ ಆಗಬಹುದು,'' ಎಂದರು.

''ನಗರದ ನಕ್ಸಲರು ಎಂಬುದೇನೂ ಇಲ್ಲ, ಅದಕ್ಕೆ ಅರ್ಥವೂ ಇಲ್ಲ,'' ಎಂದ ಆನಂದ್ ತೇಲ್ ತುಂಬ್ಡೆ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದರಲ್ಲದೆ ''ಆರೋಪಗಳು ನಿರಾಧಾರ ಹಾಗೂ ಪೊಲೀಸರ ಊಹೆಯಾಗಿದೆ'' ಎಂದರು.

ಈ ಹಿಂದೆ ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಬಂಧಿತರಾದವರ ಪತ್ರ ವ್ಯವಹಾರಗಳಲ್ಲಿ `ಕಾಮ್ರೇಡ್ ಆನಂದ್' ಎಂದು ಬರೆದಿರುವುದು ಆನಂದ್ ತೇಲ್ ತುಂಬ್ಡೆಯವರನ್ನೇ ಉಲ್ಲೇಖಿಸಿ ಬರೆದಿದ್ದು ಎಂದು ಪೊಲೀಸರು ನಂಬಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ''ಭೂಗತ ಚಟುವಟಿಕೆಗಳಲ್ಲಿ ತೊಡಗುವವರು ಇಂತಹ ಪತ್ರಗಳನ್ನು ಬರೆಯುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ,'' ಎಂದು ತೇಲ್ ತುಂಬ್ಡೆ ಹೇಳಿದರು.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಇಲ್ಲಿಯ ತನಕ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದರೆ ತೇಲ್ ತುಂಬ್ಡೆ ಬಂಧನಕ್ಕೊಳಗಾದ ಹನ್ನೊಂದನೆಯವರಾಗಿದ್ದರು. ಆದರೆ ಅವರಿಗೆ ಫೆಬ್ರವರಿ 11ರ ತನಕ ಬಂಧನದಿಂದ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಿರುವುದರಿಂದ ಪುಣೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ವಿಶೇಷ ನ್ಯಾಯಾಲಯ ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಅವರ ಬಿಡುಗಡೆಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News