ಬಜೆಟ್‌ನಲ್ಲಿ ಬೇಡಿಕೆ ಈಡೇರಿಸುವ ಭರವಸೆ; ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್

Update: 2019-02-05 12:34 GMT

ಬೆಂಗಳೂರು, ಫೆ.5: ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಭರವಸೆ ನೀಡಿರುವ ಹಿನ್ನಲೆ ಪ್ರತಿಭಟನೆ ವಾಪಸ್ಸು ಪಡೆಯಲಾಗಿದೆ.

ಕಾರ್ಮಿಕ ಕಾಯ್ದೆ ಜಾರಿಯ ಜತೆಗೆ, ಸಮಾನ ಕೆಲಸಕ್ಕೆ ಸಮಾನ ವೇತನ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಕಿಯರ ಸಂಘದ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ಮೈದಾನದಲ್ಲಿ ಪ್ರತಿಭಟನೆ ನಡೆಸ ಲಾಗುತಿತ್ತು. ಮಂಗಳವಾರ ಸಚಿವೆ ಜಯಮಾಲಾ, ಬೇಡಿಕೆ ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಅಂಗನವಾಡಿ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಜಯಮಾಲಾ, ರಾಜ್ಯದ ಹೆಣ್ಣು ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರು ಹೊತ್ತಿದ್ದಾರೆ. ಕೇವಲ ಇಲಾಖೆ ಅಲ್ಲದೇ, ಒಬ್ಬ ಮಹಿಳೆಯಾಗಿ ನಿಮ್ಮ ಪರವಾಗಿದ್ದು, ಬಜೆಟ್‌ನಲ್ಲಿ ನಿಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅಷ್ಟೇ ಅಲ್ಲದೆ, ಹಿಂದಿನ ಹಾಗೂ ಸಮ್ಮಿಶ್ರ ಸರಕಾರ ನಿಮ್ಮ ಬಗ್ಗೆ ಕಾಳಜಿ ಹೊಂದಿದೆ ಎಂದು ನುಡಿದರು.

ಕಾರ್ಮಿಕ ಕಾಯ್ದೆ, ಸಮಾನ ಕೆಲಸಕ್ಕೆ ಸಮಾನ ವೇತನ ಬೇಡಿಕೆ ಸಂಬಂಧ ಕೇಂದ್ರ, ರಾಜ್ಯ ಸರಕಾರ ಒಟ್ಟಿಗೆ ಸಾಧಕ-ಬಾಧಕ ಚರ್ಚೆ ಮಾಡಬೇಕಾಗುತ್ತೆ ಎಂದ ಅವರು, ಕೇಂದ್ರ ಸರಕಾರ ಮೂಗಿಗೆ ತುಪ್ಪಸವರುತ್ತಿದ್ದಾರೆ. ಯೋಜನೆಗಳನ್ನು ಜಾರಿಗೆ ತಂದು ರಾಜ್ಯ ಸರಕಾರದ ಹೆಗಲಿಗೆ ಬಿಡುತ್ತಾರೆ. ಆದರೆ, ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

5 ಸಾವಿರ ರೂ.ಪಿಂಚಣಿ ನೀಡಬೇಕೆಂಬುವುದು ನಿಮ್ಮ ಬೇಡಿಕೆ. ಇದು ಆರ್ಥಿಕ ಹೊರೆ ವಿಚಾರ. ಆದರೂ, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಮಿನಿ ಅಂಗನವಾಡಿ ಮೇಲ್ದರ್ಜೆ ಸಂಬಂಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಹತ್ತು ವರ್ಷದ ಮೇಲೆ ದುಡಿದ ಕಾರ್ಯಕರ್ತೆಯರಿಗೆ ಇಲಾಖೆಯಲ್ಲಿ ಕೆಲಸ ವಿಚಾರ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಗರ್ಭಿಣಿಯವರಿಗೆ ಊಟ ಕೊಡುವ ವಿಚಾರ ಕುರಿತು ಪ್ರತಿಕ್ರಿಯಿಸಿ, ದೂರದ ಗುಡ್ಡಗಾಡು ಪ್ರದೇಶದಲ್ಲಿ ಗರ್ಭಿಣಿಯರಿಗೆ ಕೇಂದ್ರ ಬರೋದಕ್ಕೆ ಕಷ್ಟ ಆಗುತ್ತದೆ. ಆ ಸಂದರ್ಭದಲ್ಲಿ ನೀವು ಕೊಡುವುದು ಒಳ್ಳೇಯದು. ಮಾತೃಪೂರ್ಣ, ಯಶಸ್ವಿ ಯೋಜನೆ ಬೇಡ ಎಂದು ಹೇಳಬೇಡಿ ಎಂದು ನುಡಿದರು.

‘ಮತ್ತೆ ಹೋರಾಟಕ್ಕೆ ಬರುತ್ತೇವೆ’
ರಾಜ್ಯ ಸರಕಾರ ಈ ಸಾಲಿನ ಬಜೆಟ್‌ನಲ್ಲಿ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಹೀಗಾಗಿ, ಪ್ರತಿಭಟನೆ ಹಿಂಪಡೆಯಲಾಗಿದೆ. ಬಜೆಟ್‌ನಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ, ಕಾನೂನು ಹೋರಾಟದ ಜೊತೆಗೆ, ತಿಂಗಳುಗಟ್ಟಲೆ, ಅಹೋರಾತ್ರಿ ಹೋರಾಟ ನಡೆಸಲಾಗುವುದು.
-ಜಯಲಕ್ಷ್ಮೀ, ಅಧ್ಯಕ್ಷೆ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News