ಪ್ರತಿ ಮನೆಯಲ್ಲಿ ಗಿಡ ಬೆಳೆಸುವ ಪರಿಪಾಠ ಬೆಳೆಯಲಿ: ಬಂಡೆಪ್ಪ ಕಾಶೆಂಪೂರ್

Update: 2019-02-05 18:25 GMT

ಬೀದರ್, ಫೆ.5: ಜೀವನಕ್ಕೆ ಅಗತ್ಯವಿರುವ ಶುದ್ಧ ಗಾಳಿ, ನೀರು ಬೇಕಾದಲ್ಲಿ ಅರಣ್ಯವನ್ನು ಸಂರಕ್ಷಿಸಬೇಕು. ಪ್ರತಿಯೊಂದು ಮನೆಯಲ್ಲಿ ಗಿಡಗಳನ್ನು ಬೆಳೆಸುವ ಪರಿಪಾಠ ಬೆಳೆಯಬೇಕಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.
ನಗರದ ಶಹಾಪೂರ ಗೇಟ್ ಸಮೀಪದ ಹಳ್ಳದಕೇರಿಯಲ್ಲಿರುವ 18 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾದ ವೃಕ್ಷೋದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಜೀವಿಗಳಿಗೆ ಮಾರಕವಾಗಿ ಪರಿಣಮಿಸಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬೇಕಿದೆ. ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದೇ ಇದಕ್ಕಿರುವ ಪರಿಣಾಮಕಾರಿ ಉಪಾಯವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಲು ಇರುವ ಗಿಡಗಳನ್ನು ಸಂರಕ್ಷಿಸಿ, ಇನ್ನಷ್ಟು ಗಿಡಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಮ್‌ಖಾನ್ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಶುದ್ಧ ಗಾಳಿ ಮತ್ತು ನೀರಿನ ಅವಶ್ಯಕತೆ ಇದೆ. ಹಿರಿಯ ನಾಗರಿಕರಿಗೆ ದೈಹಿಕ ಆರೋಗ್ಯ ಕಾಪಾಡಲು ನೆರವಾಗುವ ನಿಟ್ಟಿನಲ್ಲಿ ಈ ವೃಕ್ಷೋದ್ಯಾನದಲ್ಲಿ ವ್ಯಾಯಾಮ ಸಾಮಗ್ರಿಗಳನ್ನು ಅಳವಡಿಸುವ ಯೋಜನೆಯಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅರವಿಂದ್‌ಕುಮಾರ್ ಅರಳಿ ಮಾತನಾಡಿ, ಜಿಲ್ಲೆಯಲ್ಲಿ ಖಾಲಿ ಇರುವ ಸ್ಥಳಗಳನ್ನು ಗುರುತಿಸಿ ಇನ್ನೂ ಹೆಚ್ಚಿನ ಉದ್ಯಾನಗಳನ್ನು ನಿರ್ಮಿಸುವ ಅಗತ್ಯವಿದೆ. ಇದರಿಂದ ಅರಣ್ಯ ಪ್ರಮಾಣ ಹೆಚ್ಚುವುದಲ್ಲದೇ ಜನರಿಗೆ ಅನುಕೂಲವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷರಾದ ಶಾಲಿನಿ ರಾಜು ಚಿಂತಾಮಣಿ ಮಾತನಾಡಿ, ಜನತೆಗೆ ಅನುಕೂಲವಾಗಲೆಂದು ಸರಕಾರವು ಸಾಕಷ್ಟು ಹಣ ಖರ್ಚು ಮಾಡಿ ಸುಂದರ ಉದ್ಯಾನವನ್ನು ನಿರ್ಮಿಸಿಕೊಟ್ಟಿದೆ. ಜನರು ಇದರ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಗೀತಾಂಜಲಿ, ಬೀದರ್ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಾಮನಗಟ್ಟಿ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ತೋಡುರಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ.ಎಂ.ಸಗಾವೆ, ಎ.ಬಿ.ಪಾಟೀಲ್, ಬೀದರ್ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿ ಅಬ್ದುಲ್ ಝಮೀರ್, ಅರಣ್ಯ ಇಲಾಖೆಯ ವನ್ಯಜೀವಿ ಪರಿಪಾಲಕ ಸದಸ್ಯ ಶೈಲೇಂದ್ರ ಕಾವಡಿ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News