ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆ

Update: 2019-02-06 14:02 GMT

ಮಡಿಕೇರಿ, ಫೆ.6: ಜಿಲ್ಲೆಯ ಹಲವೆಡೆ ಬುಧವಾರ ಈ ವರ್ಷದ ಮೊದಲ ಮಳೆಯಾಗಿದ್ದು, ಜನತೆ ಹರ್ಷಗೊಂಡಿದ್ದಾರೆ.  

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಜೆಯ ವೇಳೆ ಹನಿ ಮಳೆಯಾಗಿದ್ದರೆ, ತಾಲೂಕಿನ ನಾಪೋಕ್ಲು ಸುತ್ತಮುತ್ತ ಸರಿ ಸುಮಾರು 30 ಸೆ.ಮೀ. ಮಳೆಯಾಗುವ ಮೂಲಕ ಕೊಂಚ ತಂಪಿನ ವಾತಾವರಣ ಮೂಡಿತು. 

ಅಕಾಲಿಕ ಮಳೆಯಿಂದ ಜನಸಾಮಾನ್ಯರ ಮೊಗದಲ್ಲಿ ಹರ್ಷ ಮೂಡಿದರೂ, ಕಾಫಿ ಬೆಳೆಗಾರರು ಒಂದಷ್ಟು ಆತಂಕಕ್ಕೆ ಸಿಲುಕಿದ್ದಾರೆ. ಕಣದಲ್ಲಿ ಒಣಗುತ್ತಿದ್ದ ಕಾಫಿ ಫಸಲು ದಿಢೀರ್ ಮಳೆಗೆ ಒದ್ದೆಯಾಗಿದ್ದರೆ, ಅದಾಗಲೆ ಹಣ್ಣಾಗಿರುವ ಕರಿಮೆಣಸು ಫಸಲು ಉದುರುವುದಕ್ಕೆ ಕಾರಣವಾಗಿದೆ. 

ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿತ್ತಾದರೂ, ಏಕಾಏಕಿ  ಮಳೆಯಾಗುತ್ತದೆಂಬ ನಿರೀಕ್ಷೆ ಇರಲಿಲ್ಲ. ಬುಧವಾರ ಅಪರಾಹ್ನ  ನಾಪೋಕ್ಲು ವ್ಯಾಪ್ತಿಯಲ್ಲಿ ಗುಡುಗು ಸಹಿತ ಸುರಿದ ಮಳೆಗೆ ಬೆಳೆಗಾರರ ಮುಖದಲ್ಲಿ ಸಂಭ್ರಮದ ಬದಲು, ಆತಂಕ ಮೂಡಿತು.  

ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಮೊದಲ ಮಳೆಯಾಗುತ್ತಿತ್ತು. ಆ ಮೂಲಕ  ಕಾಫಿ ಗಿಡಗಳಲ್ಲಿ  ಮುಂದಿನ ವರ್ಷದ ಭವಿಷ್ಯ  ಅರಳುತ್ತಿತ್ತು. ಆದರೆ, ಬೆಳೆಗಾರರು ಇನ್ನೂ ಕೊನೇ ಹಂತದ ಪ್ರಕ್ರಿಯೆಯಲ್ಲಿರುವಾಗಲೇ ವರ್ಷಾಧಾರೆಯಾಗಿರುವುದು ಒಂದಿಷ್ಟು ಸಮಸ್ಯೆಗೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News