ಶಾಸಕ ಜೆ.ಎನ್.ಗಣೇಶ್ ಬಂಧನಕ್ಕೆ ಸ್ಪೀಕರ್ ಅನುಮತಿ ?
ಬೆಂಗಳೂರು, ಫೆ.6: ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಾಪತ್ತೆಯಾಗಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ವಿಧಾನಸಭೆಯ ಅಧಿವೇಶನಕ್ಕೆ ಹಾಜರಾದರೆ, ಅವರನ್ನು ಬಂಧಿಸಬಹುದು ಎಂದು ಪೊಲೀಸರಿಗೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆ ಪ್ರಕರಣದ ಬಳಿಕ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಜ್ಞಾತಸ್ಥಳದಲ್ಲಿ ತಲೆ ಮರೆಸಿಕೊಂಡಿರುವ ಗಣೇಶ್, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಬೆಂಗಳೂರು, ಮುಂಬೈ, ಹೈದರಾಬಾದ್ ಹೀಗೆ ಸ್ಥಳವನ್ನು ಬದಲಾಯಿಸುತ್ತಾ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಗಣೇಶ್ ಬಂಧನಕ್ಕಾಗಿ ರಾಮನಗರ ಪೊಲೀಸರು, ಮೂರು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ ಎನ್ನಲಾಗಿದೆ.
ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕೆಂದು ವಿಪ್ ಜಾರಿ ಮಾಡಲಾಗಿದೆ. ಅಲ್ಲದೆ, ಸದನಕ್ಕೆ ಗೈರು ಹಾಜರಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕಾಂಗ್ರೆಸ್ ಪಕ್ಷ ನೀಡಿರುವುದರಿಂದ ಗಣೇಶ್ ಸದನಕ್ಕೆ ಹಾಜರಾಗುವ ಸಾಧ್ಯತೆಗಳು ಹೆಚ್ಚಿವೆ.
ಅಧಿವೇಶನದ ಸಮಯದಲ್ಲಿ ಶಾಸಕರನ್ನು ಬಂಧಿಸಲು ಸ್ಪೀಕರ್ ಅನುಮತಿ ಕಡ್ಡಾಯ. ಆದುದರಿಂದ, ಶಾಸಕ ಗಣೇಶ್ ಅಧಿವೇಶನಕ್ಕೆ ಬಂದರೆ ಅವರನ್ನು ಬಂಧಿಸಲು ಅನುಮತಿ ನೀಡುವಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಿನ್ನೆಯೇ ಸ್ಪೀಕರ್ ರಮೇಶ್‌ಕುಮಾರ್ ಅವರನ್ನು ಭೇಟಿ ಮಾಡಿ ಅನುಮತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಧಿವೇಶನದ ಮೊದಲ ದಿನವಾದ ಇಂದು ಗಣೇಶ್ ಸದನಕ್ಕೆ ಬಂದಿರಲಿಲ್ಲ. ಆದರೆ, ಫೆ.8ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅವರು ಸದನಕ್ಕೆ ಹಾಜರಾಗಬಹುದು ಎಂದು ನಿರೀಕ್ಷಿಸಲಾಗಿದೆ. ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆನಂದ್ ಸಿಂಗ್ ಇಂದು ಸದನಕ್ಕೆ ಹಾಜರಾಗಿದ್ದರು.