ಈ ನಾಯಕನಿಂದ ಪ್ರಭಾವಿತನಾಗಿ ಕೋಕೊ ಕೋಲಾ ಕುಡಿಯುವುದನ್ನೇ ಬಿಟ್ಟರು ಸಿದ್ದರಾಮಯ್ಯ !

Update: 2019-02-06 15:51 GMT

ಬೆಂಗಳೂರು, ಫೆ. 6: ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡೀಸ್ ಅವರ ಹೋರಾಟದಿಂದ ಪ್ರಭಾವಿತನಾದ ನಾನು ಅಂದಿನಿಂದ ಈವರೆಗೂ ಕೋಕೊ ಕೋಲಾ ಪಾನಿಯವನ್ನೇ ಸೇವಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪು ಮಾಡಿಕೊಂಡರು.

ಬುಧವಾರ ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್‌ ಕುಮಾರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಕೋಕೊ ಕೋಲಾ ಪಾನಿಯ ವಿರೋಧಿಸಿ ಜಾರ್ಜ್ ಫರ್ನಾಂಡೀಸ್ ನಡೆಸಿದ ಹೋರಾಟದಿಂದ ಪ್ರಭಾವಿತನಾಗಿದ್ದೆ ಎಂದು ಹೇಳಿದರು.

ಪಾದ್ರಿಯಾಗಲು ತರಬೇತಿ ಪಡೆದುಕೊಂಡಿದ್ದ ಜಾರ್ಜ್, 1949ರಲ್ಲಿ ಉದ್ಯೋಗವನ್ನರಿಸಿ ಮುಂಬೈಗೆ ತೆರಳಿ ಕಾರ್ಮಿಕರನ್ನು ಸಂಘಟಿಸಿ ಒಂದೇ ವರ್ಷದಲ್ಲಿ ಕಾರ್ಮಿಕ ಚಳವಳಿಯ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದ್ದರು ಎಂದು ಸ್ಮರಿಸಿದರು.

1961ರಲ್ಲಿ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಸದಸ್ಯರಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಅವರು, ಶೋಷಿತ ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸಿದ್ದರು. 1967ರಲ್ಲಿ ಬಾಂಬೆ ದಕ್ಷಿಣ ಕ್ಷೇತ್ರದಿಂದ ಲೋಕಸಭೆ ಆಯ್ಕೆಯಾಗಿದ್ದ ಜಾರ್ಜ್ ಫರ್ನಾಂಡೀಸ್, ಸತತ 9 ಬಾರಿ ಸಂಸದರಾಗಿ ಚುನಾಯಿತರಾಗಿದ್ದರು. ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಕೊಂಕಣ ರೈಲ್ವೆ ಯೋಜನೆ ಹರಿಕಾರರಾಗಿ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಬಹುಭಾಷೆಗಳನ್ನು ಬಲ್ಲ ಉತ್ತಮ ವಾಗ್ಮಿಯಾಗಿದ್ದ ಅವರು, ತಮ್ಮ ಬದುಕಿನುದ್ದಕ್ಕೂ ಸರಳ ಜೀವನ ನಡೆಸುತ್ತಾ ದಕ್ಷ ಮತ್ತು ಪ್ರಾಮಾಣಿಕರಾಗಿ ಸಾರ್ವಜನಿಕ ಸೇವೆ ಸಲ್ಲಿಸಿದರು ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡರು.

ಕೇಂದ್ರ ಸಂಪರ್ಕ, ಕೈಗಾರಿಕಾ, ರೈಲ್ವೆ ಹಾಗೂ ರಕ್ಷಣಾ ಸಚಿವರಾಗಿ ಭದ್ರತೆಯೇ ಇಲ್ಲದೆ ಸೇವೆ ಸಲ್ಲಿಸಿ ಅಪರೂಪದ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ ಅವರ ಕೊಡುಗೆ ನನ್ನ ರಾಜಕೀಯ ಬೆಳವಣಿಗೆಯಲ್ಲಿಯೂ ಇದೆ ಎಂದು ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News