×
Ad

ಬೆಳಕು ಮೀನುಗಾರಿಕೆಗೆ ಕಡ್ಡಾಯ ನಿಷೇಧ: ಕೇಂದ್ರದ ಆದೇಶ ಪಾಲಿಸಲು ಮೀನುಗಾರರ ಸಂಘಕ್ಕೆ ಹೈಕೋರ್ಟ್ ನಿರ್ದೇಶನ

Update: 2019-02-06 22:00 IST

ಬೆಂಗಳೂರು, ಫೆ.6: ಕರ್ನಾಟಕ ಹಾಗೂ ಕೇರಳ ಸೇರಿದಂತೆ ಕರಾವಳಿಯ ವಿಶೇಷ ಆರ್ಥಿಕ ವಲಯದ ವ್ಯಾಪ್ತಿಗೊಳಪಡುವ ಸಮುದ್ರದಲ್ಲಿ ಬೆಳಕು ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶ ಪಾಲಿಸುವಂತೆ ಉಡುಪಿ ಬಂದರಿನ ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಒಳಗೊಂಡ ವಿಶೇಷ ಆರ್ಥಿಕ ವಲಯದ ಸಮುದ್ರದಾಳದಲ್ಲಿ ಎಲ್‌ಇಡಿ ಹಾಗೂ ಇತರೆ ಬೆಳಕು ಬಳಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ಕೇಂದ್ರ ಮೀನುಗಾರಿಕೆ ಸಚಿವಾಲಯ 2017ರ ನ.10ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಲು ಕೋರಿ ಉಡುಪಿಯ ಮಲ್ಪೆ ಬಂದರಿನ ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಸಂಘಕ್ಕೆ ಷರತ್ತುಬದ್ಧ ಮೀನುಗಾರಿಕೆಗೆ ಅವಕಾಶ ನೀಡಿ 2018ರ ಡಿ.21ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಮಾರ್ಪಡಿಸಿತು. ಹಾಗೆಯೇ, ಕೇಂದ್ರದ ಆದೇಶ ಪಾಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು.

ಎಲ್‌ಇಡಿ ಮತ್ತಿತರ ಬೆಳಕು ಬಳಸಿ ಸಮುದ್ರಾಳದಲ್ಲಿ ಮೀನುಗಾರಿಕೆ ನಡೆಸುವುದರಿಂದ ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಿಳಿಸಿ ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ 2017ರ ನ.10ರಂದು ಬೆಳಕು ಮೀನುಗಾರಿಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿದ್ದರ ಅರ್ಜಿದಾರರು, ಕೋಟ್ಯಂತರ ಹಣ ಬಂಡವಾಳ ಹೂಡಿಕೆ ಮಾಡಿ ಯಾಂತ್ರೀಕೃತ ದೋಣಿ ಖರೀದಿಸಿ ಬೆಳಕು ಬಳಸಿ ಮೀನುಗಾರಿಕೆ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರಕಾರದ ಆದೇಶದಿಂದ ಬೆಳಕು ಮೀನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ನಷ್ಟ ಅನುಭವಿಸಲಿದೆ. ರಾಜ್ಯಗಳ ಅಭಿಪ್ರಾಯ ಕೇಳದೆ ಕೇಂದ್ರವು ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.

ಕೇಂದ್ರ ಸರಕಾರಿ ವಕೀಲೆ ಎಂ.ಸಿ.ನಾಗಶ್ರೀ ವಾದ ಮಂಡಿಸಿ, ಸಮುದ್ರದಾಳದಲ್ಲಿ ಯಾಂತ್ರೀಕತ ದೋಣಿ ಮೂಲಕ ಎಲ್‌ಇಡಿ, ಹಾಲೋಜನ್ ಮತ್ತಿತರ ಬೆಳಕು ಬಳಸಿ ಮೀನುಗಾರಿಕೆ ಮಾಡಿದರೆ ಅಪರೂಪದ ಮೀನಿನ ಸಂತತಿ ಹಾಗೂ ಮೀನು ಮರಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಅಂಶವನ್ನು ಅರಿತ ಕೇಂದ್ರ ಸರಕಾರ ಬೆಳಕು ಮೀನುಗಾರಿಕೆ ಮೇಲೆ ನಿಷೇದ ಹೇರಿದೆ. ಈ ಕ್ರಮ ನ್ಯಾಯಸಮ್ಮತವಾಗಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದರು. ಕೇಂದ್ರ ಸರಕಾರದ ವಾದಕ್ಕೆ ಮನ್ನಣೆ ನೀಡಿದ ನ್ಯಾಯಪೀಠ ಮೇಲಿನಂತೆ ಆದೇಶ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News