ಗಾಣಿಗ ಗುರುಪೀಠಕ್ಕೆ ನೀಡಿದ ಅನುದಾನ ದುರ್ಬಳಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-02-06 16:48 GMT

ಬೆಂಗಳೂರು, ಫೆ.6: ಗಾಣಿಗ ಜನಾಂಗದ ಗುರುಪೀಠಕ್ಕೆ ನೀಡಿದ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ಎನ್.ಹನುಮೇಗೌಡ ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಸರಕಾರದ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಐಡಿ, ವಿಶ್ವ ಗಾಣಿಗರ ಸಮುದಾಯ ದತ್ತಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

2011ರ ಫೆಬ್ರುವರಿಯಲ್ಲಿ ಗಾಣಿಗ ಜನಾಂಗದ ಗುರುಪೀಠಕ್ಕೆ ಬಜೆಟ್‌ನಲ್ಲಿ 5 ಕೋಟಿ ಮೀಸಲು ಇರಿಸಲಾಗಿತ್ತು. ಈ ಹಣ ದುರ್ಬಳಕೆ ಆಗಿದೆ ಎಂಬುದು ಅರ್ಜಿದಾರರ ಅರೋಪ. ಈ ಹಣ ಮೀಸಲಿಟ್ಟ ವೇಳೆ ಬಿ.ಎಸ್. ಯಡಿಯೂರಪ್ಪಮುಖ್ಯಮಂತ್ರಿ ಆಗಿದ್ದರು. ಇವರ ಆಪ್ತರಾಗಿದ್ದ ಬಿ.ಜೆ ಪುಟ್ಟಸ್ವಾಮಿ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ನೋಂದಣಿ ಮಾಡಿಸಿ ಅದಕ್ಕೆ ಅಧ್ಯಕ್ಷರಾಗಿದ್ದರು. ದಾಸನಪುರ ಬಳಿ 10 ಎಕರೆ ಗೋಮಾಳ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಗುತ್ತಿಗೆ ಪಡೆದಿದ್ದರು. ಶಿಕ್ಷಣ ಸಂಸ್ಥೆ ಇಲ್ಲದಿದ್ದರೂ 10 ಎಕರೆ ಜಮೀನನ್ನು ಟ್ರಸ್ಟ್ ಹೆಸರಿಗೆ ಮಂಜೂರು ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಹೇಳಿದ್ದ ಟ್ರಸ್ಟ್, ಸರಕಾರ ನೀಡಿದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಅಂಶವನ್ನು ಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲೂ ಕಾಣಿಸಲಾಗಿದೆ ಎಂಬುದು ಆರೋಪದ ಮತ್ತೊಂದು ಅಂಶ. ಈ ಕಾರಣಗಳಿಂದ, ಸರಕಾರ ನೀಡಿದ್ದ 5 ಕೋಟಿ ಹಿಂಪಡೆಯಲು ನಿರ್ದೇಶಿಸಬೇಕು ಎಂದು ಹನುಮೇಗೌಡ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News