ಸುಬ್ರಹ್ಮಣ್ಯ ಮಠದ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
ಬೆಂಗಳೂರು, ಫೆ.6: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಭಕ್ತರಿಗೆ ಮೋಸ ಮತ್ತು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಮುಂದಿನ ವಿಚಾರಣೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಆರ್. ಸಂತೋಷ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಸುಬ್ರಹ್ಮಣ್ಯ ಮಠದ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಮುಂದಿನ ವಿಚಾರಣೆಗೆ ತಡೆ ನೀಡಿ, ಪ್ರಕರಣದ ಪ್ರತಿವಾದಿಗಳಾದ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅರ್ಜಿದಾರರ ಪರ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದರು.
ಪ್ರಕರಣವೇನು: ರಾಜ್ಯ ಮುಜರಾಯಿ ಇಲಾಖೆಗೊಳಪಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೇವರ ಮೂಲ ವಿಗ್ರಹ, ಉತ್ಸವ ಮೂರ್ತಿ, ಜಾತ್ರೆ, ದೇವಳದ ಮುಂಭಾಗದ ಗೋಪುರ, ದೇವಳದ ಮಾಹಿತಿಗಳು ಹಾಗೂ ಸೇವಾ ವಿವರಗಳನ್ನು ಸಂಪುಟ ಟ್ರಸ್ಟ್ ಖಾಸಗಿ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಪ್ರಕಟಿಸಿ ಕುಕ್ಕೆ ಸುಬ್ರಹ್ಮಣ್ಯ ದೇವರ ಹೆಸರಲ್ಲಿ ಭಕ್ತಾದಿಗಳಿಗೆ ಮೋಸ ಮಾಡಲಾಗಿದೆ. ಅಲ್ಲದೇ ಈ ಮೂಲಕ ದೇವಸ್ಥಾನಕ್ಕೆ ಬರುವ ಆದಾಯವನ್ನು ತಡೆಯಲಾಗಿದೆ ಎಂದು ಆರೋಪಿಸಿ ದೇವಸ್ಥಾನದ ಆಡಳಿತ ಮಂಡಳಿ ದೂರು ಸಲ್ಲಿಸಿತ್ತು.
ಈ ದೂರನ್ನು ಆಧರಿಸಿ 2018ರ ನ.17ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ಠಾಣೆ ಪೊಲೀಸರು, ಅದನ್ನು ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಮುಖ್ಯಸ್ಥರು ಮತ್ತು ಪದಾಧಿಕಾರಿಗಳಿಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ (ಸಿಸಿಎಚ್-53) 2018ರ ನ.24ರಂದು ಜಾಮೀನು ಮಂಜೂರು ಮಾಡಿತ್ತು.