ಫೆ.8 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ
ಬೆಂಗಳೂರು, ಫೆ.6: ಮಕ್ಕಳನ್ನು ಬಾಧಿಸುವ ಜಂತುಹುಳುನ ಸೋಂಕಿನಿಂದ ರಕ್ಷಿಸಲು ಫೆ.8 ರಂದು ರಾಜ್ಯದ ಎರಡು ಕೋಟಿಗೂ ಅಧಿಕ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಉಚಿತವಾಗಿ ನೀಡಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ರಮೇಶ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ಅಂಗನವಾಡಿ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ನೀಡುವುದರ ಮೂಲಕ ಜಂತುಹುಳು ನಿವಾರಣಾ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಜಂತುಹುಳು ಬಾಧಿತ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಸುಸ್ತು ಹಾಗೂ ನಿಶಕ್ತಿ ಕಂಡುಬರುವುದರಿಂದ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳನ್ನು ಸದೃಢರನ್ನಾಗಿಸಲು, ಫೆ.8 ರಂದು ರಾಜ್ಯದ ಖಾಸಗಿ, ಸರಕಾರಿ, ಅನುದಾನಿತ ಶಾಲೆಗಳ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿನ ಒಂದರಿಂದ 19ವರ್ಷದೊಳಗಿನ 2.05ಕೋಟಿ ಮಕ್ಕಳಿಗೆ ಜಂತುಹುಳು ಮಾತ್ರೆ(ಆಲ್ಬೆಂಡಾಜೊಲ್)ಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಮಾತ್ರೆಯು ಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಜಂತುಹುಳು ನಾಶಕ ಮಾತ್ರೆ ನೀಡದೇ ಇರುವ ಮಕ್ಕಳಿಗೆ ಫೆ.14 ರಂದು ನಿವಾರಣಾ ದಿನದಂದು ಮಾತ್ರೆಯನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖಾಧಿಕಾರಿ ಡಾ.ವೀಣಾ, ಡಾ.ಪ್ರಭುದೇವಗೌಡ, ಡಾ. ಸುರೇಶ್ ಶಾಸ್ತ್ರೀ, ಎಡೆನ್ಸ್ ಆಕ್ಷನ್ ಸ್ವಯಂಸೇವಾ ಸಂಸ್ಥೆಯ ದೀಪಾ ರೋಸ್ ಸೇರಿದಂತೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಅಂಗನವಾಡಿ, ಸರಕಾರಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.