ಪರಿಶಿಷ್ಟ ಸಮುದಾಯದ ಅಭಿವೃದ್ದಿಗೆ ಹೆಚ್ಚಿನ ಒತ್ತು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಬಾಗೇಪಲ್ಲಿ,ಫೆ.6: ವಿಧಾನಸಭಾ ಕ್ಷೇತ್ರದ ಪರಿಶಿಷ್ಠ ಜಾತಿ ಮತ್ತು ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಅವರು ಇಂದು ತಾಲೂಕಿನ ಮಿಟ್ಟೇಮರಿ ಹೋಬಳಿಯಲ್ಲಿ ಎಸ್.ಸಿ.ಪಿ ಮತ್ತು ಎಸ್.ಟಿ.ಪಿ ಯೋಜನೆಯಲ್ಲಿ ಸುಮಾರು 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆಯನ್ನು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಸ್ತೆಗಳು ಜನರ ಸಂಪರ್ಕದ ನಾಡಿಗಳಾಗಿದ್ದು ರಸ್ತೆಗಳು ಉತ್ತಮವಾಗಿದ್ದರೆ ಸುಗಮ ಸಂಚಾರಕ್ಕೆ ಕಾರಣವಾಗುತ್ತದೆ. ಈಗಾಗಲೇ ಕ್ಷೇತ್ರದಾದ್ಯಂತ ಎಲ್ಲಾ ಕಡೆಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಮಾಡಲು ಹೆಚ್ಚಿನ ಶ್ರಮ ವಹಿಸುತ್ತಿದ್ದು, ಹಂತ-ಹಂತವಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವಿಶೇಷವಾಗಿ ಎಸ್ಸಿ/ಎಸ್ಟಿ ಸಮುದಾಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅಗತ್ಯಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ರಸ್ತೆ, ಚರಂಡಿ, ನೀರು, ಶಾಲೆ ಮತ್ತಿತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದರು.
ಇಂದು ಸಹ ಸುಮಾರು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ. ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಗಮನಿಸುತ್ತಿರಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕಾದರೆ ಸಾರ್ವಜನಿಕರ ಜವಾಬ್ದಾರಿಯೂ ಹೆಚ್ಚಾಗಿರುತ್ತದೆ. ಎಲ್ಲಿಯೇ ಆಗಲಿ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಕಂಡುಬಂದರೆ ಅದನ್ನು ನಿಲ್ಲಿಸಿ ನನ್ನ ಗಮನಕ್ಕೆ ತನ್ನಿ ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಕೆಡಿಪಿ ಸದಸ್ಯರಾದ ಅಮರನಾಥರೆಡ್ಡಿ, ಮುಖಂಡರಾದ ಮುರಳೀಧರ, ಮುನಿಸ್ವಾಮಿ, ಶಿವಕುಮಾರ್, ಶಿವ, ಕೃಷ್ಣಪ್ಪ, ಆನಂದ್, ರಘು, ಲೋಕೋಪಯೋಗಿ ಎಇಇ ರಾಮಲಿಂಗಾರೆಡ್ಡಿ, ನಾರಾಯಣರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.