ಶೃಂಗೇರಿಯನ್ನು ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಆದ್ಯತೆ: ಶಾಸಕ ರಾಜೇಗೌಡ

Update: 2019-02-06 18:26 GMT

ಜಯಪುರ, ಫೆ.6: ಶೃಂಗೇರಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಉತ್ತಮ ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಆದ್ಯತೆ ನೀಡುತ್ತೇನೆ ಎಂದು ಶಾಸಕ ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು. 

ಅನೇಕ ವರ್ಷಗಳ ಕನಸಾಗಿದ್ದ ಪಟ್ಟಣದ ನೂತನ ಸುಸಜ್ಜಿತ ಬಸ್‍ನಿಲ್ದಾಣ, ಅತಿವೃಷ್ಠಿಯಿಂದ ಹಾನಿಯಾದ ಮುಖ್ಯರಸ್ತೆ ದುರಸ್ತಿಗೆ ಶಿಲಾನ್ಯಾಸ, ಪಶುವೈದ್ಯ ಆಸ್ಪತ್ರೆ, ಜಲದುರ್ಗದ ಬೀದಿದೀಪ, ಶುದ್ಧ ಕುಡಿಯುವ ನೀರಿನ ಘಟಕವನ್ನು ಅವರು ಉದ್ಘಾಟಿಸಿದರು.

ಬಳಿಕ ನಿಲ್ದಾಣದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿನ ಗ್ರಾಮೀಣ ರಸ್ತೆ, ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸುಮಾರು ರೂ. 200 ಕೋಟಿ ಕಾಮಗಾರಿಯನ್ನು ಕಳೆದ 6 ತಿಂಗಳುಗಳಲ್ಲಿ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರವನ್ನು ರಾಜ್ಯದ ಅಭಿವೃದ್ಧಿಯ ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ. ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶೃಂಗೇರಿಗೆ ಹೋಗುವ ಮುಖ್ಯರಸ್ತೆಯ ಗಡಿಕಲ್ ಕುಂಚೇಬೈಲು ನಡುವಿನ ಅಂಕುಡೊಂಕಾದ ರಸ್ತೆಯನ್ನು ನವೀಕರಣಗೊಳಿಸಿ ನೇರ ಮಾರ್ಗ ಮಾಡುವ ಕಾರ್ಯ ನಡೆಯುತ್ತಿದೆ. ಚಿಕ್ಕಮಗಳೂರಿನಿಂದ ಕೊಪ್ಪದವರೆಗಿನ ಮುಖ್ಯರಸ್ತೆಯಲ್ಲಿರುವ ಕಿರಿದಾದ ಮೋರಿಗಳನ್ನು ಅಗಲೀಕರಣ ಮಾಡಿ ಶೀಘ್ರದಲ್ಲೆ ನವೀಕರಿಸಲಾಗುವುದು ಹಾಗೂ ಜಯಪುರ ನಗರದ ಎಲ್ಲಾ ಒಳರಸ್ತೆಗಳನ್ನು ದುರಸ್ಥಿ ಮಾಡಿ ಡಾಂಬರೀಕರಣ ಮಾಡಲಾಗುವುದು ಎಂದರು.

ಜಯಪುರ ಗ್ರಾ.ಪಂ. ಸದಸ್ಯ ಡಿ.ಬಿ.ರಾಜೇಂದ್ರ ಮಾತನಾಡಿ, 35 ವರ್ಷಗಳಷ್ಟು ಹಳೆಯದಾದ ಬಸ್‍ ನಿಲ್ದಾಣವೊಂದು ಪಂಚಾಯತ್ ಹಾಗೂ ಶಾಸಕರ ಪೂರ್ಣ ಸಹಕಾರದಿಂದ ಸುಸಜ್ಜಿತವಾಗಿ ಮರುಹುಟ್ಟು ಪಡೆದಿದೆ. ಪಂಚಾಯತ್ ನಿಂದ ಸಂಪನ್ಮೂಲ ಕ್ರೋಢಿಕರಿಸಿ ರೂ. 26 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ದುರಸ್ಥಿ ಹಾಗೂ ಶಾಸಕರ ಅನುದಾನದ ರೂ. 16 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ನಡೆದಿದೆ. ಬಸ್‍ಸ್ಟ್ಯಾಂಡ್ ಪಕ್ಕದ ಮಳಿಗೆ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಂಡಿದೆ. 2004ರ ನಂತರ ಇದೇ ಮೊದಲ ಬಾರಿಗೆ ಬಸ್‍ ನಿಲ್ದಾಣ ಡಾಂಬರೀಕರಣಗೊಂಡಿದೆ. ಈ ಎಲ್ಲಾ ಪ್ರಗತಿಯನ್ನು ಕಂಡು ಅಸೂಯೆ ಪಡುವ ಕೆಲವರು ಟೀಕೆ ಟಿಪ್ಪಣಿಗಳನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಮಾತನಾಡಿ, ಜಿಲ್ಲಾ ಪಂಚಾಯತ್ ನಲ್ಲಿ ಸದ್ಯಕ್ಕೆ ಅನುದಾನದ ಕೊರತೆಯಿದ್ದು, ಅಗತ್ಯವಿರುವಲ್ಲಿ ಯಾವುದೇ ತಾರತಮ್ಯ ಮಾಡದೆ ಜನಪರ ಕೆಲಸ ಮಾಡಲಾಗುತ್ತಿದೆ. ಸ್ಥಳೀಯ ಪಂಚಾಯತ್ ಸ್ಥಳ ಸೂಚಿಸಿದಲ್ಲಿ ಆಟೋ ಸ್ಟ್ಯಾಂಡ್ ನಿರ್ಮಿಸುವ ಕನಸಿದೆ ಎಂದರು.

ಇದೇ ಸಂದರ್ಭದಲ್ಲಿ 94ಸಿಯಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ನೀಡಿದ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಬಸ್‍ನಿಲ್ದಾಣ ನಿರ್ಮಾಣ ಕಾರ್ಯದಲ್ಲಿ ಹಗಲು ರಾತ್ರಿ ಶ್ರಮಿಸಿದವರಿಗೆ, ಕುಡಿಯುವ ನೀರಿನ ಘಟಕ ಕೊಡುಗೆ ನೀಡಿದ್ದ ಉದ್ಯಮಿ ಅಬುಲ್ ಕಲಾಂರವರಿಗೆ, ಇತ್ತೀಚೆಗೆ ಮಳಿಗೆ ಸಮೀಪದಲ್ಲಿ ಅಪಘಾತಕ್ಕೊಳಗಾದ ಗಾಯಾಳುಗಳಿಗೆ ನೆರವಾಗಿ ಮಾನವೀಯತೆ ಮೆರೆದ ಕೃಷ್ಣಪ್ಪರವರಿಗೆ, ರೋಟರಿ ಅಧ್ಯಕ್ಷ ಬಿ.ಎಸ್.ರಮೇಶ್, ಕಾರ್ಯದರ್ಶಿ ಕೆ.ಆರ್.ಶ್ರೀಕರ ಕೋಣಂಬಿರವರಿಗೆ ಹಾಗೂ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುರವರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷೆ ಜಯಂತಿ ನಾಗರಾಜ್, ಉಪಾಧ್ಯಕ್ಷೆ ಲಲಿತಾ, ಗ್ರಾ.ಪಂ. ಅಧ್ಯಕ್ಷ ಹರೀಶ್, ಸದಸ್ಯರುಗಳಾದ ಎ.ಆರ್.ರಾಜೇಶ್, ಎ.ಆರ್.ಮಹೇಶ್, ಕೆ.ಜಿ.ಸತೀಶ್, ಪ್ರಫುಲ್ಲ, ಅಂಜಲಿ, ದಾನಿ ದಿನೇಶ್ ಹಂತುವಾನೆ, ಮುಖಂಡರುಗಳಾದ ಸುಧೀರ್ ಕುಮಾರ್ ಮೂರೊಳ್ಳಿ, ರವೀಂದ್ರ ಕುಕ್ಕುಡಿಗೆ, ಸುಕುಮಾರ್, ಬಿ.ಎಂ.ಸುದೇವ್, ಎಚ್.ಎಂ. ಸತೀಶ್, ಡಿ.ಎಸ್.ಸತೀಶ್, ನುಡಿಚಿತ್ರ ಸಂಗ್ರಹಕ ಶಂ.ನ.ಶೇಷಗಿರಿ, ಜಯವಂತ ಭಟ್ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ವನಿತಾ ಸ್ವಾಗತಿಸಿ, ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News