ಬಿಜೆಪಿ ನಾಯಕರ ಪತ್ರಿಕಾಗೋಷ್ಠಿಗೆ ಹೆಲ್ಮೆಟ್ ಧರಿಸಿಕೊಂಡು ಭಾಗವಹಿಸಿದ ಪತ್ರಕರ್ತರು!

Update: 2019-02-07 05:05 GMT

ಹೊಸದಿಲ್ಲಿ, ಫೆ.7: ಸ್ಥಳೀಯ ಪತ್ರಕರ್ತ ಸುಮನ್ ಪಾಂಡೆಯವರ ಮೇಲೆ ಹಲ್ಲೆ ನಡೆಸಿದ ಸಂಬಂಧ ಬಂಧನಕ್ಕೀಡಾಗಿರುವ ಭಾರತೀಯ ಜನತಾ ಪಕ್ಷದ ರಾಯಪುರ ಜಿಲ್ಲಾ ಘಟಕದ ಅಧ್ಯಕ್ಷ ರಾಜೀವ್ ಅಗರ್‌ವಾಲ್ ಅವರ ವಿರುದ್ಧ ಪ್ರತಿಭಟಿಸಲು ಪತ್ರಕರ್ತರು ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ಬುಧವಾರ ಪತ್ರಕರ್ತರು ಸ್ಥಳೀಯ ಬಿಜೆಪಿ ನಾಯಕ ಜತೆ ಹೆಲ್ಮೆಟ್ ಧರಿಸಿಕೊಂಡು ಸಂವಾದ ನಡೆಸಿದರು ಎಂದು ರಾಯಪುರ ಪ್ರೆಸ್‌ಕ್ಲಬ್ ಅಧ್ಯಕ್ಷ ದಾಮು ಅಮೆದಾರ್ ಹೇಳಿದ್ದಾರೆ.

"ಅದು ಸಮಾರಂಭವಾಗಿರಲಿ, ಪತ್ರಿಕಾಗೋಷ್ಠಿಯಾಗಿರಲಿ, ಸಭೆ ಅಥವಾ ಅವರಿಂದ ಹೇಳಿಕೆ ಪಡೆಯುವುದಿರಲಿ; ನಮ್ಮ ಸುರಕ್ಷತೆಗೆ ಅಪಾಯವನ್ನು ನಾವು ಆಹ್ವಾನಿಸಿಕೊಳ್ಳುವುದಿಲ್ಲ" ಎಂದು 'ದ ಪ್ರಿಂಟ್' ಜಾಲತಾಣದ ಜತೆ ಮಾತನಾಡಿದ ಅಮೆದಾರ್ ತಿಳಿಸಿದ್ದಾರೆ.

ನಗರದ ಕನಿಷ್ಠ 500-600 ಪತ್ರಕರ್ತರು ಹಲ್ಲೆ ಘಟನೆಯನ್ನು ಖಂಡಿಸಿ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸಿದರು ಮತ್ತು ಬೈಕ್ ರ್ಯಾಲಿಯನ್ನೂ ನಡೆಸಿದರು. ಮಂಗಳವಾರ ಬೈಕ್ ರ್ಯಾಲಿ ನಡೆಸಿದ ಪತ್ರಕರ್ತರು ಬಿಜೆಪಿ ಕಚೇರಿಯ ಮುಂದೆ ಘೋಷಣೆಗಳನ್ನು ಕೂಗಿದರು.

ರಾಯಪುರದ ಪತ್ರಕರ್ತರು ಬಿಜೆಪಿಗೆ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ: ಅಗರ್‌ವಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು, ಪತ್ರಕರ್ತರ ಸುರಕ್ಷಗೆ ಹೊಸ ಕಾನೂನು ಜಾರಿಗೊಳಿಸಬೇಕು.

ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಮಸೂದೆ ಮಂಡಿಸುವ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪರಿಶೀಲಿಸುತ್ತಿದ್ದಾರೆ.

ಈ ಮಧ್ಯೆ ಶನಿವಾರ ಪಕ್ಷದ ವಿಭಾಗೀಯ ಕಚೇರಿಯಲ್ಲಿ ನಡೆದ ಘಟನೆ ಬಗ್ಗೆ ಪ್ರಸ್ತಾವಿಸಿದ ಬಿಜೆಪಿ ರಾಜ್ಯ ಕಚೇರಿಯ ಉಸ್ತುವಾರಿ ಸುಭಾಷ್ ರಾವ್, "ಸಂವಾದದ ಬಳಿಕ ಫೋಟೊ ಕ್ಲಿಕ್ಕಿಸಿಕೊಂಡು ಹೊರಗೆ ಹೋಗುವಂತೆ ಪತ್ರಕರ್ತರಿಗೆ ಕೋರಲಾಗಿತ್ತು. ಆದರೆ ಪಾಂಡೆ ಸಭೆಯಲ್ಲೇ ಉಳಿದುಕೊಂಡು, ಬಿಜೆಪಿ ಸಭೆಯ ನಡಾವಳಿಗಳನ್ನು ವೀಡಿಯೊದಲ್ಲಿ ದಾಖಲಿಸಿಕೊಂಡು ಬೇಹುಗಾರಿಕೆಗೆ ಯತ್ನಿಸಿದರು. ಇದರಿಂದಾಗಿ ಪಕ್ಷದ ಕಾರ್ಯಕರ್ತರು ಅವರನ್ನು ಹೊರಕ್ಕೆ ಕಳುಹಿಸಿದರು" ಎಂದು ಸ್ಪಷ್ಟನೆ ನೀಡಿದ್ದಾರೆ.

"ಮಾಧ್ಯಮ ಎಂದರೆ ಮಾಧ್ಯಮ; ಅವರು ಪ್ರತಿಭಟನೆ ನಡೆಸಿ ಘಟನೆಯನ್ನು ಅನಗತ್ಯವಾಗಿ ಕೆದಕಿದ್ದಾರೆ. ಬಿಜೆಪಿ ತನ್ನ ಕಡೆಯಿಂದ ಏನು ಸಾಧ್ಯವೋ ಅದನ್ನು ಮಾಡಿದೆ. ನಾವು ಕೈಮುಗಿದು ಕ್ಷಮೆಯನ್ನೂ ಕೇಳಿದ್ದೇವೆ. ನಾವು ಇನ್ನೇನು ಮಾಡಬಹುದು" ಎನ್ನುವುದು ರಾವ್ ಪ್ರಶ್ನೆ.

ಘಟನೆ ವಿವರ: ಇತ್ತೀಚೆಗೆ ನಡೆದ ಛತ್ತೀಸ್ ಗಢ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣವನ್ನು ಆಂತರಿಕವಾಗಿ ಪರಾಮರ್ಶಿಸುವ ಸಲುವಾಗಿ ಬಿಜೆಪಿ ವಿಭಾಗೀಯ ಕಚೇರಿಯಲ್ಲಿ ನಡೆದ ಸಭೆಯ ವರದಿಗಾರಿಕೆಗೆ ಪಾಂಡೆ ಇತರ ಪತ್ರಕರ್ತರ ಜತೆಗೆ ತೆರಳಿದ್ದರು. ಸಭೆಯಲ್ಲಿ ವಾಗ್ವಾದ ನಡೆದಾಗ ಪಾಂಡೆ ತಮ್ಮ ಫೋನ್‌ನಲ್ಲಿ ಇದನ್ನು ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದರು.

ಬಿಜೆಪಿ ಮುಖಂಡರು ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಜತೆಗೆ ಗುರುತಿನ ಪತ್ರ ಕೇಳಿದಾಗ, ಅವರು ಅದನ್ನು ತೋರಿಸಲೂ ಇಲ್ಲ; ಆ ವರದಿಗಾರ ಐಡಿ ಕಾರ್ಡ್ ಹೊಂದಿರಲೂ ಇಲ್ಲ ಎಂದು ಪಿಟಿಐ ಹಿರಿಯ ವರದಿಗಾರ ಸಂಜೀವ್ ಗುಪ್ತಾ "ದ ಪ್ರಿಂಟ್"ಗೆ ವಿವರಿಸಿದರು. "ಅವರು ಪಾಂಡೆಯ ಫೋನ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಲು ಮುಂದಾದರು. ಈ ಮಧ್ಯೆ ವರದಿಗಾರನ ಮೇಲೆ ಕೈ ಮಾಡಿ ಚೆನ್ನಾಗಿ ಥಳಿಸಿದರು" ಎಂದು ಗುಪ್ತಾ ತಿಳಿಸಿದ್ದಾರೆ.

ಪಾಂಡೆ ಪತ್ರಿಕೆಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ಈ ಘಟನೆ ನಡೆದ ಬಳಿಕ 20 ನಿಮಿಷ ಕಾಲ ಸಭೆ ನಡೆಯುತ್ತಿದ್ದ ಕೊಠಡಿಯಲ್ಲಿ ಕೂಡಿಹಾಕಿ ಬಳಿಕ ಬಿಡುಗಡೆ ಮಾಡಲಾಗಿದೆ.

ತಮ್ಮ ಮೇಲೆ ಹಲ್ಲೆ ನಡೆಸಿದ ಇತರ ಮೂವರು ಆರೋಪಿಗಳನ್ನು ಕೂಡಾ ಪಾಂಡೆ ಗುರುತಿಸಿದ್ದಾರೆ. ಸ್ಥಳೀಯ ಬಿಜೆಪಿ ಪದಾಧಿಕಾರಿಗಳಾದ ವಿಜಯ ವ್ಯಾಸ್, ಉತ್ಕರ್ಷ್ ಮತ್ತು ದೀನಾ ಡೋಂಗ್ರೆ ಹಲ್ಲೆ ನಡೆಸಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 342 (ಅಕ್ರಮವಾಗಿ ಕೂಡಿಹಾಕಿದ್ದು), 323 (ಸ್ವಯಂಪ್ರೇರಿತವಾಗಿ ಹಲ್ಲೆ ನಡೆಸಿದ್ದು), 504 (ಅಪರಾಧ ಕುಮ್ಮಕ್ಕು) ಮತ್ತು 34 (ಸಮಾನ ಉದ್ದೇಶ) ಅನ್ವಯ ದೂರು ದಾಖಲಾಗಿದೆ. ಆದರೆ ಆರೋಪಿಗಳೆಲ್ಲರೂ ಅದೇ ದಿನ ಸಂಜೆ ಜಾಮೀನು ಪಡೆದಿದ್ದಾರೆ.

ಪತ್ರಕರ್ತರು ಶನಿವಾರ ರಾತ್ರಿಯಿಡೀ ಬಿಜೆಪಿ ಕಚೇರಿ ಹೊರಗೆ ಧರಣಿ ನಡೆಸಿದರು. ಆ ಬಳಿಕ ಬಿಜೆಪಿ ಛತ್ತೀಸ್‌ಗಢ ಘಟಕದ ಅಧ್ಯಕ್ಷ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಧರ್ಮಲಾಲ್ ಕೌಶಿಕ್ ಮತ್ತು ಮಾಜಿ ಸಚಿವ ಬ್ರಿಜ್‌ಮೋಹನ್ ಅಗರ್‌ವಾಲ್ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು ಎಂದು ಅಮೆದಾರ್ ವಿವರಿಸಿದ್ದಾರೆ.

"ಆದರೆ ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲ. ಅವರ ಪಕ್ಷದ ಮುಖಂಡರು, ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ನಿರಾಕರಿಸುತ್ತಲೇ ಬಂದಿದ್ದಾರೆ. ನಾವು ವೀಡಿಯೊ ತೋರಿಸಿದರೂ, ಅವರು ನಮ್ಮ ಮಾತು ಕೇಳಲು ಸಿದ್ಧರಿಲ್ಲ" ಎಂದು ಅಮೆದಾರ್ ಹೇಳಿದ್ದಾರೆ.

"ಹೆಲ್ಮೆಟ್, ಬಿಜೆಪಿಯ ಗಮನ ಸೆಳೆಯಲು ನೆರವಾಗಿದೆಯೋ ಇಲ್ಲವೋ, ಆದರೆ ನಾವು ಮಾತ್ರ ನಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಸ್ಥಗಿತಗೊಳಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News