ಪರಿಷತ್ ನಲ್ಲಿ ಎರಡನೆ ದಿನವೂ ಬಿಜೆಪಿ ಗದ್ದಲ: ಕಲಾಪ ಮುಂದೂಡಿಕೆ

Update: 2019-02-07 15:01 GMT

ಬೆಂಗಳೂರು, ಫೆ.7: ರಾಜ್ಯ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡಿರುವುದರಿಂದ ಕಲಾಪ ನಡೆಸಬಾರದು ಎಂದು ಒತ್ತಾಯಿಸಿ ಬಿಜೆಪಿ ವಿಧಾನ ಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿ ಧರಣಿ ನಡೆಸಲು ಮುಂದಾದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.

ಗುರುವಾರ ಬೆಳಗ್ಗೆ 10.30ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ವೇಳೆ ಪತ್ರಿಪಕ್ಷದ ನಾಯಕ ಕೋಟಾ ಶ್ರೀನಿವಾಸ್‌ ಪೂಜಾರಿ ಆಕ್ಷೇಪಿಸಿ, ಸರಕಾರ ಬಹುಮತ ಕಳೆದುಕೊಂಡಿದೆ. ಅಲ್ಪಮತಕ್ಕೆ ಕುಸಿದಿರುವ ಸರಕಾರ ಹೇಗೆ ಕಲಾಪವನ್ನು ನಡೆಸುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯಪಾಲರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ವೇಳೆ ಕೆಲವು ಶಾಸಕರು ಸದನಕ್ಕೆ ಬಾರದೆ ಗೈರು ಹಾಜರಾಗಿದ್ದಾರೆ. ಇದು ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಈಗಾಗಲೇ ಕೆಲವರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಿದ್ದೂ ಕಲಾಪ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಐವಾನ್ ಡಿಸೋಜ ಅವರು, ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ. ಸರಕಾರಕ್ಕೆ ಬಹುಮತ ಇಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ? ನಿಮ್ಮ ಬಳಿ ಯಾವ ಶಾಸಕರು ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಒಂದಿಬ್ಬರು ಶಾಸಕರು ಗೈರು ಹಾಜರಾದರೆ ಅದಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲು ಸಾಧ್ಯವೇ? ಎಲ್ಲ ಶಾಸಕರು ಸದನಕ್ಕೆ ಆಗಮಿಸಲಿದ್ದಾರೆ. ನಿಮಗೆ ಆ ಬಗ್ಗೆ ಯಾವುದೇ ಅಪನಂಬಿಕೆ ಬೇಡ. ಕಲಾಪ ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಹಂತದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸರಕಾರಕ್ಕೆ ಬಹುಮತ ಇಲ್ಲ ಎಂದು ನೀವು ಕಲ್ಪನೆ ಮಾಡಿಕೊಂಡು ಮಾತನಾಡುವುದು ಸರಿಯಲ್ಲ. ಎಷ್ಟು ಶಾಸಕರು ಬಂದಿಲ್ಲ. ಯಾವ ಕಾರಣಕ್ಕಾಗಿ ಗೈರು ಹಾಜರಾಗಿದ್ದಾರೆ. ಇದು ನಮ್ಮ ಪಕ್ಷಕ್ಕೆ ಸಂಬಂಧಪಟ್ಟ ವಿಷಯ. ಶಾಸಕರು ಗೈರು ಹಾಜರಾಗಿದ್ದಕ್ಕೆ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ಭಾವಿಸಿದರೆ ಹೇಗೆ? ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರ ಸುಗಮವಾಗಿ ಆಡಳಿತ ನಡೆಸಲು ಅವಕಾಶ ನೀಡಬೇಕು. ಈ ರೀತಿ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಕೋಟಾ ಶ್ರೀನಿವಾಸ ಪೂಜಾರಿ ಪರ ಬಿಜೆಪಿ ಸದಸ್ಯರು ನಿಂತರೆ, ಪರಮೇಶ್ವರ್ ಪರ ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು.

ಸಚಿವರಾದ ಝಮೀರ್‌ ಅಹ್ಮದ್, ಜಯಮಾಲಾ ಮತ್ತು ವೆಂಕಟರಮಣಪ್ಪ ಸೇರಿದಂತೆ ಮತ್ತಿತರರು ಬಿಜೆಪಿ ನಡೆಯನ್ನು ವಿರೋಧಿಸಿದರು. ಪುನಃ ಸದನದಲ್ಲಿ ಗದ್ದಲ, ಕೋಲಾಹಲ, ಆರೋಪ, ಪ್ರತ್ಯಾರೋಪ ನಡೆಯಿತು. ಸದಸ್ಯರು ಕಲಾಪ ನಡೆಯಲು ಅವಕಾಶ ನೀಡಬೇಕೆಂದು ಸಭಾಪತಿ ಮಾಡಿಕೊಂಡ ಮನವಿ ಪ್ರಯೋಜನವಾಗಲಿಲ್ಲ. ಈ ವೇಳೆ ಬಿಜೆಪಿ ಸದಸ್ಯರು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಬಿಜೆಪಿ ಸದಸ್ಯರು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದರು. ಈ ಹಂತದಲ್ಲಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸಚಿವ ಝಮೀರ್ ಅಹ್ಮದ್ ಅವರು ಬಿಜೆಪಿಗೆ ಓಟು ಹಾಕಿದವರು ಮುಸ್ಲಿಮರೇ ಅಲ್ಲ ಎಂದು ಹೇಳಿಕೆ ನೀಡಿರುವ ಭಿತ್ತಿ ಪತ್ರ, ವಕ್ಫ್ ಆಸ್ತಿ ಕಬಳಿಕೆ ಎಂಬ ಭಿತ್ತಿಪತ್ರವನ್ನು ಕೈಯಲ್ಲಿ ಹಿಡಿದು ಸದನದ ಬಾವಿಗೆ ಇಳಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಂತದಲ್ಲಿ ಸಭಾಪತಿಗಳು ನಾಳೆ(ಶುಕ್ರವಾರ)ಗೆ ಕಲಾಪವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News