ಬಿಜೆಪಿ ಗದ್ದಲಕ್ಕೆ ಎರಡನೆ ದಿನದ ಕಲಾಪವೂ ಬಲಿ
ಬೆಂಗಳೂರು, ಫೆ. 7: ‘ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಹುಮತ ಕಳೆದುಕೊಂಡಿದ್ದು, ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು, ಸ್ವೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಹಿನ್ನೆಲೆಯಲ್ಲಿ ಎರಡನೆ ದಿನದ ಕಲಾಪ ಗದ್ದಲಕ್ಕೆ ಬಲಿಯಾಯಿತು.
ಗುರುವಾರ ವಿಧಾನಸಭೆ ಕಲಾಪ ಬೆಳಗ್ಗೆ 11ಗಂಟೆಗೆ ನಿಗದಿಯಾಗಿತ್ತಾದರೂ, ಕಲಾಪ ಸಲಹಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಅರ್ಧಗಂಟೆ ತಡವಾಗಿ ಕಲಾಪ ಆರಂಭವಾಯಿತು. ಆದರೆ, ನಿನ್ನೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ, ಧರಣಿ ನಡೆಸಿದ್ದ ಬಿಜೆಪಿ ಸದಸ್ಯರು, ಇಂದೂ ತಮ್ಮ ಧರಣಿಯನ್ನು ಮುಂದುವರೆಸಿದರು.
ಸದನದ ಕೋರಂ ಬೆಲ್ ಬಾರಿಸುತ್ತಿದ್ದಂತೆಯೇ ಸದನಕ್ಕೆ ಬಂದ ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದ ಮುಂದಿನ ಬಾವಿಯಲ್ಲಿ ನಿಂತು ಧರಣಿ ಮುಂದುವರೆಸಿದರು. ಅಲ್ಲದೆ, ‘ಬಹುಮತ ಕಳೆದುಕೊಂಡ ಸರಕಾರಕ್ಕೆ ಧಿಕ್ಕಾರ, ಕೆಳಗಿಳಿಯಿರಿ.. ಕೆಳಗಿಳಿಯಿರಿ ಕುರ್ಚಿಯಿಂದ ಕೆಳಗಿಳಿಯಿರಿ’ ಎಂದು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು.
ಬಿಜೆಪಿ ಸದಸ್ಯರ ಧರಣಿ, ಗದ್ದಲದ ಮಧ್ಯೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಕಾರ್ಯಕಲಾಪ ಪಟ್ಟಿಯಂತೆ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಮಂಡಿಸುವಂತೆ ಸೂಚನೆ ನೀಡಿದರು. ಅದರಂತೆ ಗದ್ದಲದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವರು ತಮ್ಮ ಹೆಸರಿನ ಮುಂದಿರುವ ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಿದರು.
ಆ ಬಳಿಕ 1992ನೆ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಇಬ್ಬರು ಸದಸ್ಯರನ್ನು ಚುನಾಯಿಸಬೇಕೆಂಬ ಚುನಾವಣಾ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಜೆಪಿ ಗದ್ದಲದಲ್ಲಿಯೇ ಪ್ರಸ್ತಾಪಿಸಿದರು.
ಈ ಮಧ್ಯೆಯೇ ಸ್ಪೀಕರ್ ರಮೇಶ್ ಕುಮಾರ್, ರಾಜ್ಯಪಾಲರ ಭಾಷಣಕ್ಕೆ ವಂದನಾ ಪ್ರಸ್ತಾವವನ್ನು ಮಂಡಿಸುವಂತೆ ಕಾಂಗ್ರೆಸ್ ಸದಸ್ಯ ಎಸ್.ಟಿ.ಸೋಮಶೇಖರ್ ಅವರಿಗೆ ಸೂಚಿಸಿದ್ದು, ಅದರಂತೆ ಸೋಮಶೇಖರ್ ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣಾ ಸಲ್ಲಿಸುವ ಪ್ರಸ್ತಾವವನ್ನು ಮಂಡಿಸಿದರು, ಅದನ್ನು ಜೆಡಿಎಸ್ ಸದಸ್ಯ ಎಚ್.ಕೆ. ಕುಮಾರಸ್ವಾಮಿ ಅನುಮೋದಿಸಿದರು.
ಅನಂತರ ಸೋಮಶೇಖರ್ ರಾಜ್ಯಪಾಲರ ಬಾಷಣದ ಮೇಲೆ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರ ಏರಿದ ಧ್ವನಿಯಲ್ಲಿ ಘೋಷಣೆ ಹೆಚ್ಚಾದವು. ಇದರಿಂದ ಸದನದಲ್ಲಿ ಗದ್ದಲ ಆರಂಭವಾಯಿತು. ಕಾಂಗ್ರೆಸ್ ಪಕ್ಷದ ಸದಸ್ಯರಾದ ನಾರಾಯಣಸ್ವಾಮಿ, ಶಿವರಾಂ ಹೆಬ್ಬಾರ್ ಸೇರಿದಂತೆ ಬಿಜೆಪಿ ವಿರುದ್ಧ ಘೋಷಣೆ ಆರಂಭಿಸಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಹೀಗಾಗಿ ಸ್ಪೀಕರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
12:25ರ ಸುಮಾರಿಗೆ ಸದನ ಪುನಃ ಸಮಾವೇಶಗೊಂಡಾದ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಕೆರಳಿದ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಬಿಜೆಪಿ ವಿರುದ್ಧ ಪ್ರತಿಯಾಗಿ ಘೋಷಣೆ ಕೂಗಲು ಆರಂಭಿಸಿದರು. ‘ಸುಳ್ಳು ಸುಳ್ಳು ಬಿಜೆಪಿ ಸುಳ್ಳು, ಬ್ಲೂಫಿಲಂ ಬಿಜೆಪಿಗೆ ಧಿಕ್ಕಾರ, ಪ್ರಜಾತಂತ್ರಕ್ಕೆ ಧಕ್ಕೆ ತರುತ್ತಿರುವ ದಲಿತ ವಿರೋಧಿ ಬಿಜೆಪಿಗೆ ಧಿಕ್ಕಾರ’ ಎಂದು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು.
ವಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆ ಏರಿದ ಧ್ವನಿಯಲ್ಲಿ ಘೋಷಣೆ-ಪ್ರತಿಘೋಷಣೆಯಿಂದ ಸದನದಲ್ಲಿ ಗದ್ದಲ, ಗೊಂದಲ ತಾರಕಕ್ಕೇರಿ, ಭಾರೀ ಕೋಲಾಹಲ ಸೃಷ್ಟಿಯಾಯಿತು. ಆದುದರಿಂದ ಸ್ಪೀಕರ್ ರಮೇಶ್ ಕುಮಾರ್ ನಾಳೆ(ಫೆ.8)ಕ್ಕೆ ಸದನವನ್ನು ಮುಂದೂಡಿದರು.
‘ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಕಾರಣವಿಲ್ಲದೆ ಸದನದ ಬಾವಿಗಿಳಿದು ಬಿಜೆಪಿ ಧರಣಿ ನಡೆಸುವ ಮೂಲಕ ಗದ್ದಲ ಸೃಷ್ಟಿಸಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕುತ್ತಿದೆ’
-ಕೆ.ಆರ್.ರಮೇಶ್ ಕುಮಾರ್ ಸ್ಪೀಕರ್
‘ನೀರಿಲ್ಲದ ಬಾವಿಗೆ ಬಿದ್ದು (ಸ್ಪೀಕರ್ ಪೀಠದ ಮುಂದಿನ ಸದನದ ಬಾವಿ) ಒದ್ದಾಡುವ ಬದಲು ನಿಮಗೆ ತಾಕತ್ತು ಇದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ’
-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ