ಡಾ.ವಿವೇಕ ರೈಗೆ ಗೌರವ ಪ್ರಶಸ್ತಿ, ಡಾ.ಪುರುಷೋತ್ತಮ ಬಿಳಿಮಲೆಗೆ ಸಾಹಿತ್ಯ ಶ್ರೀ ಪ್ರಶಸ್ತಿ

Update: 2019-02-07 15:19 GMT
ಡಾ.ವಿವೇಕ ರೈ, ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು, ಫೆ.7: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2018ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಡಾ.ಬಿ.ಎ.ವಿವೇಕ ರೈ, ಹಿರಿಯ ಕವಿ ಎಚ್.ಎಸ್. ವೆಂಟೇಶಮೂರ್ತಿ ಸೇರಿ ಐವರು ಹಿರಿಯ ಸಾಹಿತಿಗಳು ಹಾಗೂ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಡಾ. ಪುರುಷೋತ್ತಮ ಬಿಳಿಮಲೆ, ಡಾ.ಎಚ್.ಎಲ್.ಪುಷ್ಪ, ಕೆ.ಸಿ. ಶಿವಪ್ಪ ಒಳಗೊಂಡಂತೆ 10 ಮಂದಿ ಸಾಹಿತಿಗಳು ಆಯ್ಕೆಯಾಗಿದ್ದಾರೆ.

ಗುರುವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿ, ವಿವರ ನೀಡಿದರು.

50 ಸಾವಿರ ರೂ.ನಗದು ಹಾಗೂ ಸರಸ್ವತಿಯ ಪ್ರತಿಕೃತಿ ಒಳಗೊಂಡ ವಾರ್ಷಿಕ ಗೌರವ ಪ್ರಶಸ್ತಿಗೆ ಡಾ.ಬಿ.ಎ. ವಿವೇಕ್ ರೈ, ಡಾ.ಎಚ್.ಎಸ್. ವೆಂಕಟೇಶಮೂರ್ತಿ, ದೇಶಾಂಶ ಹುಡುಗಿ, ಸಾಯಿಸುತೆ ಹಾಗೂ ಪ್ರೊ.ಎ.ಕೆ. ಹಂಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

25 ಸಾವಿರ ರೂ. ನಗದು ಹಾಗೂ ಶಿಲಾಲೇಖೆಯ ಸ್ಮರಣಿಕೆ ಒಳಗೊಂಡ ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಡಾ. ಪುರುಷೋತ್ತಮ ಬಿಳಿಮಲೆ, ಡಾ.ಎಚ್.ಎಲ್.ಪುಷ್ಪ, ಕೆ.ಸಿ.ಶಿವಪ್ಪ, ಡಾ.ಸಿ.ಪಿ. ಸಿದ್ಧಾಶ್ರಮ, ಪ್ರೊ.ಪಾರ್ವತಿ ಜಿ. ಐತಾಳ, ಜಿ. ಕೃಷ್ಣಪ್ಪ, ಸತೀಶ ಕುಲಕರ್ಣಿ, ಡಾ. ರಂಗರಾಜ ವನದುರ್ಗ, ಪ್ರೊ. ಅಬ್ದುಲ್ ಜಿ. ಬಶೀರ್, ಹಾಗೂ ಡಾ. ಗಂಗಾರಾಂ ಚಂಡಾಳ ಅವರನ್ನು ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

2017 ನೆ ಸಾಲಿನ ವರ್ಷದ ಪುಸ್ತಕ ಬಹುಮಾನಕ್ಕೆ ಡಾ.ವಿನಯಾ ಒಕ್ಕುಂದ ಅವರ ಅನುದಿನದ ದಂದುಗ(ಅಂಕಣ ಬರಹ/ವೈಚಾರಿಕ ಬರಹ), ಚಂದ್ರಶೇಖರ ತಾಳ್ಯ ಅವರ ಮೌನ ಮಾತಿನ ಸದ್ದು(ಕಾವ್ಯ), ರೇಣುಕಾ ರಮಾನಂದ ಅವರ ಮೀನು ಪೇಟೆಯ ತಿರುವು(ಯುವಕವಿಗಳ ಪ್ರಥಮ ಸಂಕಲನ), ಗುರುಪ್ರಸಾದ್ ಕಾಗಿನೆಲೆ ಅವರ ಹಿಜಾಬ್(ಕಾದಂಬರಿ), ನಾಗರಾಜ ರಾಮಸ್ವಾಮಿ ವಸ್ತಾರೆ ಅವರ 180 ನೇ ಡಿಗ್ರಿ(ಸಣ್ಣಕಥೆ), ಬಸವರಾಜ ಸಬರದ ಅವರ ಮತ್ತೊಬ್ಬ ರಾಧೆ(ನಾಟಕ), ಪ್ರಜ್ಞಾ ಮತ್ತಿಹಳ್ಳಿ ಅವರ ಬಣ್ಣ ವರೆಸುವ ಎಣ್ಣೆಗನ್ನಡಿ(ಲಲಿತ ಪ್ರಬಂಧ), ಇಂದಿರಾ ಹೆಗಡೆ ಅವರ ಸಪ್ತಕನ್ಯೆಯರ ಕನ್ನೆಭೂಮಿಯಲ್ಲಿ ನಮ್ಮ ನಡೆ(ಪ್ರವಾಸ ಸಾಹಿತ್ಯ), ಅಮೃತಾ ರಕ್ಷಿದಿ ಅವರ ಅಮೃತಯಾನ-5 ಸಂಪುಟಗಳು(ಆತ್ಮಕತೆ) ಆಯ್ಕೆಯಾಗಿವೆ.

ಡಾ.ಎಫ್.ಟಿ.ಹಳ್ಳಿಕೇರಿ ಅವರ ಮಲ್ಲಣ ಕವಿಯ ಕೋಕಶಾಸ್ತ್ರ(ಗ್ರಂಥ ಸಂಪಾದನೆ), ಬಿ.ಎಸ್.ಸೋಮಶೇಖರ ಅವರ ಹವಾಗುಣದ ರುಜು ಬದಲಾಗಿದೆ(ವಿಜ್ಞಾನ ಸಾಹಿತ್ಯ), ಶಾರದಾ ವಿ.ಮೂರ್ತಿ ಅವರ ಮೊಟ್ಟೆಯೊಡೆದ ಮರಿಗಳು(ಮಕ್ಕಳ ಸಾಹಿತ್ಯ), ಪ್ರೊ.ಎಚ್.ಟಿ.ಪೋತೆ ಅವರ ಅಂಬೇಡ್ಕರ್ ಭಾರತ(ಮಾನವಿಕ), ಡಾ.ಜೆ.ಎಂ.ನಾಗಯ್ಯ ಅವರ ಆತ್ಮಬಲಿದಾನ(ಸಂಶೋಧನೆ), ಡಾ.ಆರ್.ಶೇಷಶಾಸ್ತ್ರಿ ಅವರ ಲಲಿತ ವಿಸ್ತರ(ಅನುವಾದ-1, ಭಾರತೀಯ ಭಾಷೆಯಿಂದ ಕನ್ನಡಕ್ಕೆ), ಡಾ.ಗೋಪಾಲ ಮಹಾಮುನಿ ಅವರ ಎಂ.ಎಂ.ಕಲಬುರ್ಗಿ(ಅನುವಾದ-2, ಕನ್ನಡದಿಂದ ಭಾರತೀಯ ಭಾಷೆಗೆ), ಪ್ರೊ.ಪಿ.ವಿ.ನಂಜರಾಜ ಅರಸು ಅವರ ನಾನು ಕನ್ನಂಬಾಡಿ ಕಟ್ಟೆ ಹೀಗೊಂದು ಆತ್ಮಕಥೆ(ಸಂಕೀರ್ಣ), ಡಾ.ಎಚ್.ಶಶಿಕಲಾ ಅವರ ಅರ್ಥದಾಚೆಯ ಬೆಡಗು(ಸಾಹಿತ್ಯ ವಿಮರ್ಶೆ) ಹಾಗೂ ಸಿ.ಮಂಗಳಾ ಅವರ ಕೃಷ್ಣಮುದ್ರಿಕೆ(ಲೇಖಕರ ಮೊದಲ ಸ್ವತಂತ್ರ ಕೃತಿ) ಕೃತಿಗಳು ಬಹುಮಾನ ಪಡೆದಿವೆ.

ದತ್ತಿನಿಧಿ ಬಹುಮಾನ: ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ ಚೆನ್ನರಾಜು ಎಂ.ಬಸಪ್ಪನದೊಡ್ಡಿ ಅವರ ಕಾಲುದಾರಿ(ಕಾವ್ಯ-ಹಸ್ತಪ್ರತಿ), ಚದುರಂಗ ದತ್ತಿನಿಧಿ ಬಹುಮಾನ ಫಕೀರ ಅವರ ಬೇರು(ಕಾದಂಬರಿ), ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ ವಸುಮತಿ ಉಡುಪ ಅವರ ದಂಡಿಗೆ ಹೆದರಲ್ಲ ದಾಳಿಗೆ ಹೆದರಲ್ಲ(ಲಲಿತ ಪ್ರಬಂಧ), ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ಚಂದ್ರಶೇಖರ ಮಂಡೆಕೋಲು ಅವರ ಅಗ್ನಿ ದಿವ್ಯದ ಹುಡುಗಿ(ಜೀವನ ಚರಿತ್ರೆ), ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ರಾಘವೇಂದ್ರ ಪಾಟೀಲ ಅವರ ಎದೆಗೆ ಎದೆ ಮಿಡಿತ(ಸಾಹಿತ್ಯ ವಿಮರ್ಶೆ)ಗೆ ಸಿಕ್ಕಿವೆ.

ಉಳಿದಂತೆ ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ ಡಾ.ಸಿ.ಆರ್.ಯರವಿನತೆಲಿಮಠ ಅವರ ಸಾಹಿತ್ಯ ವಿಮರ್ಶೆಯ ಮಾದರಿಗಳು ಭಾಗ 2 ಮತ್ತು 3(ಅನುವಾದ-1), ಮಧುರಚೆನ್ನ ದತ್ತಿನಿಧಿ ಬಹುಮಾನ ಎಚ್.ಆರ್.ಸುಜಾತಾ ಅವರ ನೀಲಿಮೂಗಿನ ನತ್ತು(ಲೇಖಕರ ಮೊದಲ ಸ್ವತಂತ್ರ ಕೃತಿ) ಹಾಗೂ ಅಮೆರಿಕನ್ನಡ ದತ್ತಿನಿಧಿ ಬಹುಮಾನ ಕೃಷ್ಣಾ ಮನವಳ್ಳಿ ಅವರ ಕರಿಮಾಯಿ(ಕನ್ನಡದಿಂದ ಆಂಗ್ಲಕ್ಕೆ ಅನುವಾದ, ಮೂಲ: ಚಂದ್ರಶೇಖರ ಕಂಬಾರ) ಕೃತಿಗಳು ಆಯ್ಕೆಯಾಗಿವೆ ಎಂದು ಅವರು ಪ್ರಕಟಿಸಿದರು. ದತ್ತಿನಿಧಿ ಹಾಗೂ ವರ್ಷದ ಪುಸ್ತಕ ಬಹುಮಾನಗಳು ಎರಡೂ 25 ಸಾವಿರ ನಗದು ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ ಎಂದರು.

2018 ನೆ ಸಾಲಿನ ವರ್ಷದ ಮಾಧ್ಯಮ ಸಾಹಿತ್ಯ ಪುರಸ್ಕಾರದಲ್ಲಿ ಮುದ್ರಣ ಮಾಧ್ಯಮ ಸಾಹಿತ್ಯ ಪುರಸ್ಕಾರವನ್ನು ಪ್ರಜಾವಾಣಿಗೆ ಹಾಗೂ ಡಿಜಿ ಮಾಧ್ಯಮ ಸಾಹಿತ್ಯ ಪುರಸ್ಕಾರವನ್ನು ಅವಧಿ ಡಿಜಿಟಲ್ ಮಾಧ್ಯಮಕ್ಕೆ ನೀಡಲು ತೀರ್ಮಾನಿಸಲಾಗಿದೆ. ಈ ಎರಡೂ ಪ್ರಶಸ್ತಿಗಳು 25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಮಾಲಗತ್ತಿ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News