×
Ad

ಐಟಿ ದಾಳಿ ಪ್ರಕರಣ: ಸಚಿವ ಡಿಕೆಶಿ ಮನವಿ ಸಲ್ಲಿಸಿದರೆ ಪರಿಗಣಿಸಲಾಗುವುದು- ಹೈಕೋರ್ಟ್‌ಗೆ ಹೇಳಿಕೆ ನೀಡಿದ ಇಡಿ

Update: 2019-02-07 20:37 IST
ಸಚಿವ ಡಿಕೆಶಿ

ಬೆಂಗಳೂರು, ಫೆ.7: ಐ.ಟಿ ದಾಳಿ ಪ್ರಕರಣದ ವಿಚಾರಣೆಗೆ ಹಾಜರಾಗುವ ದಿನಾಂಕ ಮುಂದೂಡುವಂತೆ ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ, ಡಿ.ಕೆ. ಶಿವಕುಮಾರ್ ಮತ್ತಿತರ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠಕ್ಕೆ, ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಈ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಅರ್ಜಿದಾರರು ಕಾಲಕಾಲಕ್ಕೆ ತೆರಿಗೆ ಪಾವತಿ ಮಾಡಿದ್ದಾರೆ. ಐ.ಟಿ ದಾಳಿ ನಡೆದ ಸಂದರ್ಭದಲ್ಲಿ ತೆರಿಗೆ ಪಾವತಿಸಲು ಇನ್ನೂ ಕಾಲಾವಕಾಶ ಇತ್ತು. ಹೀಗಿದ್ದರೂ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಸರಿಯಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.8 ವಿಚಾರಣೆಗೆ ಹಾಜರಾಗಲು ಇ.ಡಿ. ಸಮನ್ಸ್ ಜಾರಿಗೊಳಿಸಿದೆ. ಒಂದು ವೇಳೆ ವಿಚಾರಣೆಗೆ ಹಾಜರಾದರೆ, ಅರ್ಜಿದಾರರನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ, ಸಮನ್ಸ್‌ಗೆ ತಡೆ ನೀಡಬೇಕು ಎಂದು ಕೋರಿದರು. ಇದರಿಂದ ನ್ಯಾಯಪೀಠ, ವಿಚಾರಣೆಯ ದಿನಾಂಕವನ್ನು ವಿಸ್ತರಿಸಲು ಅರ್ಜಿದಾರರು ಮನವಿ ಮಾಡಿದರೆ ಅದನ್ನು ಪರಿಗಣಿಸಲು ಸಾಧ್ಯವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಇಡಿ ಗೆ ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನ 1.30 ಕ್ಕೆ ಮುಂದೂಡಿತು.

ಅದರಂತೆ, ಮಧ್ಯಾಹ್ನ 1.30 ಕ್ಕೆ ನ್ಯಾಯಪೀಠದ ಮುಂದೆ ಹಾಜರಾದ ಎಎಸ್‌ಜಿ ಪ್ರಭುಲಿಂಗ ಕೆ. ನಾವದಗಿ, ದಿನಾಂಕ ವಿಸ್ತರಿಸಲು ಕೋರಿ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರೆ, ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆ ದಿನಾಂಕವನ್ನು ವಿಸ್ತರಿಸಲು ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದರೆ ಅದನ್ನು ಜಾರಿ ನಿರ್ದೇಶನಾಲಯ ಪರಿಗಣಿಸಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News