ಮಹಾಮೈತ್ರಿ: ಜಾರ್ಖಂಡ್‌ನಲ್ಲಿ ಸ್ಥಾನ ಹಂಚಿಕೆ ಫೈನಲ್

Update: 2019-02-08 03:32 GMT

ರಾಂಚಿ, ಫೆ. 8: ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ರಚಿಸಲು ಉದ್ದೇಶಿಸಿರುವ ಮಹಾಮೈತ್ರಿ ಪ್ರಸ್ತಾವಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ.

ಆದರೆ ಸ್ಥಾನ ಹಂಚಿಕೆ ಬಗ್ಗೆ ಮಹಾಮೈತ್ರಿಯ ಘಟಕ ಪಕ್ಷಗಳಾದ ಕಾಂಗ್ರೆಸ್, ಜೆಎಂಎಂ, ಜೆವಿಎಂ-ಪಿ ಹಾಗೂ ಆರ್‌ಜೆಡಿ ಯಾವುದೇ ವಿವರಗಳನ್ನು ಬಿಟ್ಟುಕೊಡಲು ನಿರಾಕರಿಸಿವೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜೆಎಂಎಂ ನಾಲ್ಕು ಹಾಗೂ ಬಾಬುಲಾಲ್ ಮರಾಂಡಿ ನೇತೃತ್ವದ ಜೆವಿಎಂ-ಪಿ ಎರಡು ಸ್ಥಾನಗಳಲ್ಲಿ, ಲಾಲೂ ನೇತೃತ್ವದ ಆರ್‌ಜೆಡಿ ಒಂದು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಸಿಂಹಪಾಲು ಪಡೆಯಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಗರಿಷ್ಠ ಸ್ಥಾನಗಳಲ್ಲಿ ಈ ಪಕ್ಷ ಸ್ಪರ್ಧಿಸಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೆನ್ ಅವರು ರಾಹುಲ್‌ ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, "ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು" 35 ನಿಮಿಷಗಳ ಚರ್ಚೆ ವೇಳೆ ಬಗೆಹರಿಸಿಕೊಂಡ ಬಳಿಕ ಕಾಂಗ್ರೆಸ್ ಪಕ್ಷ ಈ ಘೋಷಣೆ ಮಾಡಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಮತ್ತು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊಂದಿದ ಆರ್‌ಪಿಎನ್ ಸಿಂಗ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಅಂತಿಮಪಡಿಸಿರುವ ಪ್ರಸ್ತಾವನೆ ಪ್ರಕಾರ, ಕಾಂಗ್ರೆಸ್ ಪಕ್ಷ ಅತ್ಯಧಿಕ ಲೋಕಸಭಾ ಸ್ಥಾನಗಳಲ್ಲಿ ಮತ್ತು ಜೆಎಂಎಂ ಅತ್ಯಧಿಕ ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಲೋಕಸಭಾ ಚುನಾವಣೆಗೆ ರಾಹುಲ್ ನೇತೃತ್ವದಲ್ಲಿ ಸ್ಪರ್ಧೆ ನಡೆದರೆ, ವಿಧಾನಸಭೆ ಚುನಾವಣೆಯ ಸಾರಥ್ಯವನ್ನು ಹೇಮಂತ್ ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

2014ರ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಮತ್ತು ಜೆಎಂಎಂ 2 ಸ್ಥಾನಗಳನ್ನು ಗೆದ್ದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News