ಖಶೋಗಿ ಹತ್ಯೆ: ವಿಶ್ವಸಂಸ್ಥೆ ತಜ್ಞರು ಹೇಳಿದ್ದೇನು ?

Update: 2019-02-08 03:44 GMT

ಜಿನೀವಾ, ಫೆ. 8 : ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಶೋಗಿಯವರನ್ನು ಟರ್ಕಿಯಲ್ಲಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆಯ ತಜ್ಞರ ತಂಡ, "ಈ ಹತ್ಯೆ ಪೂರ್ವನಿಯೋಜಿತ ಹಾಗೂ ಸೌದಿ ಅರೇಬಿಯಾ ಅಧಿಕಾರಿಗಳೇ ಈ ಕೃತ್ಯ ಎಸಗಿದ್ದಾರೆ" ಎಂದು ಅಭಿಪ್ರಾಯಪಟ್ಟಿದೆ.

ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಖಶೋಗಿ, ಸೌದಿ ಆಡಳಿತ ವ್ಯವಸ್ಥೆಯ ಕಟು ಟೀಕಾಕಾರರಾಗಿ ಗುರುತಿಸಲ್ಪಟ್ಟಿದ್ದರು. ಇವರನ್ನು ಟರ್ಕಿಯ ಇಸ್ತಾಂಬೂಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಅಕ್ಟೋಬರ್ 2ರಂದು ಹತ್ಯೆ ಮಾಡಲಾಗಿತ್ತು.

"ಟರ್ಕಿಗೆ ತೆರಳಿ ಸಂಗ್ರಹಿಸಿದ ಪುರಾವೆಗಳಿಂದ ಮೇಲ್ನೋಟಕ್ಕೆ ತಿಳಿದುಬಂದಂತೆ ಖಶೋಗಿ ಕ್ರೂರ ಹಾಗೂ ಪೂರ್ವನಿಯೋಜಿತ ಕೃತ್ಯದ ಬಲಿಪಶು; ಇದು ಸೌದಿ ಅಧಿಕಾರಿಗಳ ಯೋಜನಾಬದ್ಧ ಅಪರಾಧ" ಎಂದು ಟರ್ಕಿ ಪ್ರವಾಸ ಮುಗಿದ ಬಳಿಕ ಆಗ್ನೇಸ್ ಕ್ಯಾಲಮಾರ್ಡ್ ಅಭಿಪ್ರಾಯಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಕಟಣೆ ಹೇಳಿದೆ.

ಟರ್ಕಿ ಹೇಳಿರುವ ಪ್ರಕಾರ, 15 ಮಂದಿ ಸೌದಿ ಅರೇಬಿಯಾ ಅಧಿಕಾರಿಗಳು ಕಚೇರಿಯಲ್ಲೇ ಖಶೋಗಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆ್ಯಸಿಡ್‌ನಲ್ಲಿ ಕರಗಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು.

ಎರಡು ವಾರಗಳ ಕಾಲ ಹತ್ಯೆ ಆರೋಪವನ್ನು ನಿರಾಕರಿಸುತ್ತಲೇ ಬಂದ ಸೌದಿ ಅರೇಬಿಯಾ ಕೊನೆಗೆ, ಇದು ರಾಕ್ಷಸಿ ಕೃತ್ಯ. ಈ ಸಂಬಂಧ ಹಲವು ಮಂದಿ ಸೌದಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News