×
Ad

ನಿವೇಶನ, ಸ್ಮಶಾನ ಜಾಗಕ್ಕಾಗಿ ಆಗ್ರಹ: ಮಡಿಕೇರಿಯಲ್ಲಿ ಬಹುಜನ ಸಂಘ, ಎಸ್‍ಡಿಪಿಐ ಪ್ರತಿಭಟನೆ

Update: 2019-02-08 17:11 IST

ಮಡಿಕೇರಿ, ಫೆ.8 : ಜಿಲ್ಲೆಯ ಮಡಿಕೇರಿ ಸೇರಿದಂತೆ 3 ತಾಲೂಕುಗಳ ಬಡ ನಿರಾಶ್ರಿತರಿಗೆ 94ಸಿ ಹಾಗೂ 94ಸಿಸಿ ಅಡಿ ಹಕ್ಕುಪತ್ರ ನೀಡದೆ ತಹಶೀಲ್ದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಬಹುಜನ ಕಾರ್ಮಿಕರ ಸಂಘ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಗಾಂಧಿ ಮೈದಾನದಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಕ್ಕು ಪತ್ರ ವಂಚಿತರು ಹಾಗೂ ಸಂಘಟನೆಗಳ ಕಾರ್ಯಕರ್ತರು ತಾಲೂಕು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

94ಸಿ ಹಾಗೂ ನಗರ ವಾಸಿಗಳಿಗೆ 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸರಕಾರದ ಆದೇಶದಂತೆ ಫಲಾನುಭವಿಗಳು ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಹಶೀಲ್ದಾರ್ ಕಚೇರಿಗೆ ಬಡವರು ಪ್ರತಿದಿನ ಅಲೆದಾಡಿ ಬೇಸತ್ತು ಹೋಗಿದ್ದಾರೆ. ಕಚೇರಿ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯಿಂದ ಬಡ ವರ್ಗ ಇಕ್ಕಟ್ಟಿಗೆ ಸಿಲುಕಿದೆ ಎಂದು ಪ್ರಮುಖರು ಆರೋಪಿಸಿದರು. ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಇಲ್ಲಿಯವರೆಗೆ ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದು ಬಡವರ ಮೇಲಿನ ದೌರ್ಜನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ 94ಸಿ ಹಾಗೂ 94ಸಿಸಿ ಯಡಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ನ್ಯಾಯ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಮಡಿಕೇರಿ ತಾಲೂಕು ಪಾಲೆಮಾಡು, ಹೊದ್ದೂರು ಗ್ರಾಮದ ಸುಮಾರು 200 ನಿವಾಸಿಗಳ ಅರ್ಜಿಗಳನ್ನು ಪುರಸ್ಕರಿಸಿ ಹಕ್ಕುಪತ್ರ ನೀಡಬೇಕು, ಇಲ್ಲಿನ ಸ್ಮಶಾನ ಹಾಗೂ ಕ್ರಿಕೆಟ್ ಸಂಸ್ಥೆಯ ವಿವಾದ ಬಗೆಹರಿಯದೆ ಹಾಗೇ ಉಳಿದಿದ್ದು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ತಕ್ಷಣ ಸಮಯ ನಿಗದಿ ಮಾಡಿ ಸೂಕ್ತ ಪರಿಹಾರ ಸೂಚಿಸಬೇಕು, ಸ್ಮಶಾನ ಮಂಜೂರಾತಿ ಆದೇಶವನ್ನು ತೆಗೆದು ಹಾಕಿರುವ ಉಪವಿಭಾಗಾಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಬೇಕು, ಚೆರಿಯಪರಂಬು ಪೈಸಾರಿ, ಮಡಿಕೇರಿಯ ತ್ಯಾಗರಾಜ ಕಾಲೋನಿ ಮಲ್ಲಿಕಾರ್ಜುನ ನಗರ, ವಿದ್ಯಾನಗರ, ಕುಂಬಳಗೇರಿ, ಉಕ್ಕುಡ, ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಸೇರಿದಂತೆ ಪ್ರಕೃತಿ ವಿಕೋಪದ ಸಂದರ್ಭ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿಯಮ ಸಡಿಲಿಕೆಯ ಮೂಲಕ ಪರಿಹಾರ ಮತ್ತು ಮನೆಗಳನ್ನು ಮಂಜೂರು ಮಾಡಬೇಕು, ವಿರಾಜಪೇಟೆ ತಾಲೂಕು ಅರುವತ್ತೊಕ್ಲು ಪಂಚಾಯತ್ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಸೋಮವಾರಪೇಟೆ ತಾಲೂಕಿನ ಕೂಡಿಗೆ ಪಂಚಾಯತ್ ಗೆ ಸಂಬಂಧಪಟ್ಟ ಬ್ಯಾಡಗೊಟ್ಟ ಗ್ರಾಮದಲ್ಲಿ ಪರಿಶಿಷ್ಟ ಕುಟುಂಬಗಳು ಸುಮಾರು 70 ವರ್ಷಗಳಿಂದ ವಾಸವಿದ್ದು, ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಈ ಬೇಡಿಕೆಗಳನ್ನು ಮುಂದಿನ ಏಳು ದಿನಗಳೊಳಗೆ ಜಿಲ್ಲಾಡಳಿತ ಈಡೇರಿಸದಿದ್ದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಪ್ರಮುಖರು ಎಚ್ಚರಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News