ಕನ್ನಡ ಕಲಿತರೆ ಉದ್ಯೋಗವಿಲ್ಲ ಎಂಬ ಸುಳ್ಳು ಸುದ್ದಿ ಹೋಗಲಾಡಿಸಬೇಕು: ಆರ್.ಜಿ. ಹಳ್ಳಿನಾಗರಾಜ್

Update: 2019-02-08 12:58 GMT

ದಾವಣಗೆರೆ,ಫೆ.8: ಕನ್ನಡ ಕಲಿತರೆ ಉದ್ಯೋಗವಿಲ್ಲ, ಅನ್ನವಿಲ್ಲ, ಬದುಕಿಲ್ಲ ಎಂಬ ಸುಳ್ಳು ಸುದ್ದಿ ಹೋಗಲಾಡಿಸಿ ಕನ್ನಡ ಕಲಿತರೆ ನಾನು ಬದುಕಬಲ್ಲೆ, ಕನ್ನಡ ಅನ್ನ ಭಾಷೆ ಆಗುತ್ತದೆ ಎಂಬ ಆತ್ಮವಿಶ್ವಾಸ ಕನ್ನಡ ಕಲಿಯುವ ಮಕ್ಕಳಲ್ಲಿ ತುಂಬಿಸಬೇಕು ಎಂದು ಆರ್.ಜಿ. ಹಳ್ಳಿನಾಗರಾಜ್ ಕರೆ ನೀಡಿದರು.

ಶುಕ್ರವಾರ ತಾಲೂಕಿನ ಆನಗೋಡು ಗ್ರಾಮದ ಮರುಳಸಿದ್ದೇಶ್ವರ ದೇವಸ್ಥಾನ ಆವರಣದ ಟಿ. ಗಿರಿಜಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅವರು ಮಾತನಾಡಿದರು.

ಕನ್ನಡವನ್ನು ಕಲಿಯುವ ಮಕ್ಕಳಿಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದಲೇ ಕಲಿಸಬೇಕು. ಇಂಗ್ಲಿಷನ್ನಾಗಲಿ, ಇತರೆ ಭಾಷೆಯನ್ನಾಗಲಿ ಮಗು ಮಾತೃಭಾಷೆ ಜೊತೆಗೆ ಕಲಿಯಬಲ್ಲುದು. ಇಂಗ್ಲಿಷ್ ಪ್ರಾಥಮಿಕ ಹಂತದಲ್ಲೇ ಮೀಡಿಯಂ ಆಗಿ ಕಲಿಸುವ ಬದಲು ಭಾಷೆಯಾಗಿ ಕಲಿಸಬೇಕೆಂದು ತಜ್ಞರೆ ಹೇಳುತ್ತಾರೆ. ಕೋರ್ಟ್‍ಗಳ ಆದೇಶಗಳು ಮಕ್ಕಳ ಶಿಕ್ಷಣದ ಹಕ್ಕನ್ನೇ ಮೊಟಕುಗೊಳಿಸುತ್ತಿವೆ. ಹೀಗಾಗಿ, ಭಾಷಾತಜ್ಞರು ಅಭಿಪ್ರಾಯಿಸುವ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಬೀಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರದ ಆದೇಶವನ್ನು ಖಾಸಗಿ ಸಂಸ್ಥೆ, ಅಲ್ಪಸಂಖ್ಯಾತ ಸಂಸ್ಥೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸುವ ಮೂಲಕ ಪೋಷಕರಲ್ಲಿ ಗೊಂದಲ ಸೃಷ್ಟಿಸಿದವು. ಕನ್ನಡ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗಲು ಇಂಗ್ಲಿಷ್ ಶಿಕ್ಷಣದ ವ್ಯಾಮೋಹ ಕಾರಣ ಎಂಬುದು ನಮಗೆಲ್ಲ ಗೊತ್ತು. ಇಂಗ್ಲಿಷ್ ಕಲಿತರೆ ಸರ್ಕಾರದಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದೆ ಎಂಬ ಹಸಿಸುಳ್ಳು ಹಬ್ಬಿಸಲಾಗುತ್ತಿದ್ದು, ಕನ್ನಡದಲ್ಲಿ ಕಲಿತರೆ ಉದ್ಯೋಗ ದಕ್ಕುವುದಿಲ್ಲವೆಂಬ ಸುಳ್ಳನ್ನು ಹೋಗಲಾಡಿಸುವ ಕಾರ್ಯ, ಮಾತೃಭಾಷೆ ಕನ್ನಡಕ್ಕೆ ಬಂದಿರುವ ಕುತ್ತು ಮತ್ತು ಆತಂಕದ ಬಗ್ಗೆ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಾಸ್ತಾಪಿಸಬೇಕಿದೆ ಎಂದರು.

ಸಮ್ಮೇಳನ ಉದ್ಘಾಟಿಸಿದ ವಿದ್ವಾಂಸ ಪ್ರೊ.ಎಲ್.ಎನ್. ಮುಕುಂದರಾವ್ ಮಾತನಾಡಿ, ರಾಜ್ಯದಲ್ಲಿ ಬಂಡಾಯ ಸಾಹಿತ್ಯ ಸೃಷ್ಟಿಗೆ ಕಾರಣರಾದವರಲ್ಲಿ ಆರ್.ಜಿ. ಹಳ್ಳಿನಾಗರಾಜ್ ಪ್ರಮುಖರು. ಬಂಡಾಯ ಸಾಹಿತ್ಯ ಇತ್ತೀಚೆಗೆ ಬಂದಿದ್ದಲ್ಲ. ಶತಶತಮಾನಗಳ ಹಿಂದೆ ಬಂಡಾಯ ಸಾಹಿತ್ಯದ ಕಹಳೆ ಮೊಳಗಿಸಿದವರಲ್ಲಿ ಪಂಪ ಮೊದಲಿಗರು. ಅಗ್ರಗಣ್ಯ ಸ್ಥಾನದಲ್ಲಿದ್ದ ಸಂಸ್ಕೃತ ಭಾಷೆ ಬಿಟ್ಟು ಕನ್ನಡದಲ್ಲಿ ಕೃತಿ ಬರೆಯುವ ಮೂಲಕ ಬಂಡಾಯದ ಬಾವುಟ ಹಾರಿಸಿದವರು ಕವಿ ಪಂಪ ಎಂದು ಅವರು ವಿವರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಆಶಯ ನುಡಿಗಳನ್ನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮ್ಮೇಳನಾಧ್ಯಕ್ಷರಾದ ಆರ್.ಜಿ. ಹಳ್ಳಿನಾಗರಾಜ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಎಸ್. ಹರಿಶಂಕರ್ ಸರ್ವಾಧ್ಯಕ್ಷತೆ ಹಸ್ತಾಂತರಿಸಿದರು. ಇದೇ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಪ್ರಭುದೇವ್‍ಗೆ ಪ್ರಜಾಸ್ನೇಹಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಜಿಪಂ ಸದಸ್ಯ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ಬಸವಂತಪ್ಪ ವಹಿಸಿದ್ದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಬಿ. ರಂಗನಾಥ್, ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಸಾಹಿತಿ ಎಂ.ಕೆ. ಬಕ್ಕಪ್ಪ, ಲೇಖಕ ಎಸ್. ಸಿದ್ದೇಶ್ ಕುರ್ಕಿ, ಉಪನ್ಯಾಸಕಿ ಎಂ.ಸಿ. ಗೀತಾ ಬಸವರಾಜ್, ಎಪಿಎಂಸಿ ಅಧ್ಯಕ್ಷ ಬಿ. ವೀರಣ್ಣ, ಆನಗೋಡು ಗ್ರಾಪಂ ಅಧ್ಯಕ್ಷ ಕೆ. ರವಿ, ನೇರ್ಲಿಗೆ ಗ್ರಾಪಂ ಅಧ್ಯಕ್ಷೆ ಎಸ್. ಅಕ್ಕಮಹಾದೇವಿ, ಅಣಜಿ ಚಂದ್ರಪ್ಪ, ಎಸ್.ಕೆ. ಚಂದ್ರಶೇಖರ್, ರುದ್ರೇಶ್‍ ನಾಯ್ಕ ಸೇರಿ ಹಲವರಿದ್ದರು. ನಂತರ ಸುದ್ದಿಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ ಮತ್ತು ಸಮಾರೋಪ, ಸನ್ಮಾನ ಸಮಾರಂಭ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News