ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಐವರು ಸ್ಥಳದಲ್ಲೇ ಸಾವು
Update: 2019-02-08 19:53 IST
ವಿಜಯಪುರ,ಫೆ.8: ಆಟೋ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬರಟಗಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ.
ಮೃತರು ಡೊಣೂರು ಗ್ರಾಮದವರೆಂದು ತಿಳಿದುಬಂದಿದ್ದು, ಮೃತ ಆಟೋ ಚಾಲಕನನ್ನು ಅರವಿಂದ ಅಗಸರ(32) ಎಂದು ಗುರುತಿಸಲಾಗಿದೆ. ಇನ್ನುಳಿದ ನಾಲ್ವರ ಮಾಹಿತಿ ಲಭ್ಯವಾಗಿಲ್ಲ.
ಡೊಣೂರು ಗ್ರಾಮದಿಂದ ತಿಡಗುಂದಿ ಕಡೆಗೆ ಹೊರಟಿದ್ದ ಆಟೋಗೆ ಬರಟಗಿ ತಾಂಡಾ ಬಳಿ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಆಟೋದಲ್ಲಿದ್ದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಆಟೋ ನುಜ್ಜುಜುಜ್ಜಾಗಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.