ಸ್ಪೀಕರ್ ಮೇಲೆ ಆರೋಪ: ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಫೆ. 8: ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಮೇಲೆ ಆರೋಪ ಹೊರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಆಯವ್ಯಯ ಮಂಡನೆಗೆ ಸ್ಪೀಕರ್ ರಮೇಶ್ ಕುಮಾರ್, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಆಹ್ವಾನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿ ಬಿಜೆಪಿ ಸದಸ್ಯ ಜೆ.ಮಾಧುಸ್ವಾಮಿ, ‘ಸಭಾನಾಯಕರೂ ಆಗಿರುವ ಸಿಎಂ ಕುಮಾರಸ್ವಾಮಿ ಸ್ಪೀಕರ್ ಮೇಲೆ ಆರೋಪ ಹೊರಿಸಿದ್ದು, ಸ್ಪೀಕರ್ ಕುರ್ಚಿಗೆ ಅಪಮಾನ ಮಾಡಿದ್ದಾರೆ’ ಎಂದು ಗಮನ ಸೆಳೆದರು.
ಇದಕ್ಕೆ ವಿಪಕ್ಷ ನಾಯಕ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿ ಎದ್ದು ನಿಂತು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಸುನೀಲ್ ಕುಮಾರ್, ಸ್ಪೀಕರ್ ಕೂಡ ಆಮಿಷಕ್ಕೆ ಬಲಿಯಾಗಿದ್ದಾರೆಂದು ಆರೋಪ ಮಾಡಲಾಗಿದೆ. ಸ್ಪೀಕರ್ ಕುರ್ಚಿಗೆ ಸಭಾ ನಾಯಕರು ಗೌರವ ನೀಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ವಿರುದ್ಧ ಪ್ರತಿಯಾಗಿ ಘೋಷಣೆ ಕೂಗಿ, ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಆ ಬಳಿಕ ಸದನದ ಎಲ್ಲ ಸದಸ್ಯರಿಗೆ ಬಜೆಟ್ ಪ್ರತಿ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ, ಬಿಜೆಪಿ ಸದಸ್ಯರು ಬ್ಲಾಕ್‌ಮೇಲ್ ಸರಕಾರಕ್ಕೆ ಧಿಕ್ಕಾರ, ಬಹುಮತವಿಲ್ಲದ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಈ ನಡುವೆಯೇ ಇದಕ್ಕೆ ತಲೆ ಕೆಡಿಸಿಕೊಳ್ಳದೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಿದ್ದರು. ಈ ಮಧ್ಯೆ ವಿಪಕ್ಷ ನಾಯಕ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು.
ಅನಂತರ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದ ಬಿಜೆಪಿ ಸದಸ್ಯರು, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ‘ಬಜೆಟ್‌ಗೆ ನಮ್ಮ ವಿರೋಧವಿಲ್ಲ. ಇನ್ನು ಒಂದು ವಾರಗಳ ಕಾಲ ವಿಧಾನಸಭೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಬರ, ಕುಡಿಯುವ ನೀರು, ಅನ್ನದಾತನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ದಿಢೀರ್ ಸುದ್ಧಿಗೋಷ್ಠಿ ನಡೆಸಿ, ಸ್ಪೀಕರ್ ಮೇಲೆ ಆರೋಪ ಮಾಡುವ ಮೂಲಕ ಬಜೆಟ್ ಅಧಿವೇಶನದ ವೇಳೆ ಗೊಂದಲ ಸೃಷ್ಟಿಸಿದ್ದಾರೆಂದು ದೂರಿದರು.
‘ಬಜೆಟ್ ಪ್ರತಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ, ಸದನದ ಸದಸ್ಯರಿಗೆ ಮಾತ್ರ ಸಿಕ್ಕಿಲ್ಲ. ಹೀಗಾದರೆ ಆಯವ್ಯಯದ ಪಾವಿತ್ರತೆ ಎಲ್ಲಿಂದ ಉಳಿಯುತ್ತದೆ’ ಎಂದು ಸಭಾತ್ಯಾಗದ ಬಳಿಕ ಪುನಃ ಸದನಕ್ಕೆ ಆಗಮಿಸಿದ ಬಿಜೆಪಿ ಸದಸ್ಯರಾದ ಜೆ. ಮಾಧುಸ್ವಾಮಿ ಮತ್ತು ಕುಮಾರ ಬಂಗಾರಪ್ಪ ಸದನದಲ್ಲಿ ಬಜೆಟ್‌ನ ಜೆರಾಕ್ಸ್ ಪ್ರತಿ ಪ್ರದರ್ಶಿಸಿದರು.