ಮೈತ್ರಿ ಸರಕಾರದ ಅನಿಶ್ಚಿತತೆಗೆ ಆಯವ್ಯಯ ಮಂಡನೆ ಮೂಲಕ ತೆರೆ ಎಳೆದ ಮುಖ್ಯಮಂತ್ರಿ

Update: 2019-02-08 16:35 GMT

ಬೆಂಗಳೂರು, ಫೆ. 8: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉಳಿಯುತ್ತಾ.. ಉರುಳುತ್ತಾ.. ಎಂಬ ಅನಿಶ್ಚಿತತೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, 2,34,153 ಕೋಟಿ ರೂ.ಗ್ರಾತದ ಆಯವ್ಯಯ ಮಂಡನೆ ಮಾಡುವ ಮೂಲಕ ತೆರೆ ಎಳೆದಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 12:30ಕ್ಕೆ ಬಜೆಟ್ ಭಾಷಣ ಆರಂಭಿಸಿದ ಕುಮಾರಸ್ವಾಮಿ, ಬಿಜೆಪಿ ಸದಸ್ಯರ ಗದ್ದಲದ ನಡುವೆ ‘ನನ್ನ ದೃಷ್ಟಿಯಲ್ಲಿ ಅತ್ಯಂತ ದುರ್ಬಲರಿಗೂ ಅತ್ಯಂತ ಪ್ರಬಲರಷ್ಟೇ ಅವಕಾಶ ದೊರಕಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನುಡಿಗಳೇ ನಮ್ಮ ಮೈತ್ರಿ ಸರಕಾರಕ್ಕೆ ಮಾರ್ಗದರ್ಶಿ ಎಂದು ಪ್ರಕಟಿಸಿದರು.

‘ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು, ಹಾಲೊಡೆಯ ಕಡೆದದನು ತಕ್ರವಾಗಿಪುದು, ಹಾಳ ಹಾಳಾಗಿಪುದು, ಹಳದಿ ಹೊಸತಾಗಿಪುದು, ಬಾಳಿಗಿದೆ ಚಿರಧರ್ಮ-ಮಂಕುತಿಮ್ಮ ಎಂದು ಡಿವಿಜಿಯವರ ಕಗ್ಗವನ್ನು ಉಲ್ಲೇಖಿಸಿ ಸುದೀರ್ಘ 3ಗಂಟೆಗಳ ಕಾಲ ನಿರರ್ಗಳವಾಗಿ ಬಜೆಟ್ ಭಾಷಣ ಮಾಡಿದರು.

ಯಶಸ್ಸಿನ ಹೆಜ್ಜೆ: ಕೃಷಿ, ತೋಟಗಾರಿಕೆ, ರೇಶ್ಮೆ, ಹಾಲು ಉತ್ಪಾದಕರು, ರೈತರು, ಮಹಿಳೆಯರು, ರಿಕ್ಷಾ, ಟ್ಯಾಕ್ಸಿ ಚಾಲಕರು, ಕಾರ್ಮಿಕರು, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಸೇರಿದಂತೆ ನಗರ-ಗ್ರಾಮೀಣ ಪ್ರದೇಶ ಹಾಗೂ ಸಮಾಜದ ಎಲ್ಲ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಯೋಜನೆಗಳನ್ನು ಪ್ರಕಟಿಸುವ ಮೂಲಕ ಯಶಸ್ಸಿನ ಹೆಜ್ಜೆಯನ್ನಿಟ್ಟಿದ್ದೇನೆ ಎಂದು ಸಮ್ಮೇಳನ ಸಭಾಂಗಣದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದರು.

ಪ್ರಸಕ್ತ ವರ್ಷ 2,34,153 ಕೋಟಿ ರೂ.ಗಾತ್ರದ ಬಜೆಟ್ ಮಂಡನೆ ಮಾಡಿದ್ದು, 2018-19ನೆ ಸಾಲಿಗೆ ಹೋಲಿಕೆ ಮಾಡಿದರೆ 15,665 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದ್ದು, ಶೇ.7.17ರಷ್ಟು ಬೆಳವಣಿಗೆಯಾಗಿದೆ ಎಂದು ಕುಮಾರಸ್ವಾಮಿ ಇದೇ ವೇಳೆ ವಿವರಿಸಿದರು.

ಕೃಷಿ, ತೋಟಗಾರಿಕೆ, ನೀರಾವರಿ ಸೇರಿದಂತೆ ಕೃಷಿ ಸಂಬಂಧಿತ ವಲಯಕ್ಕೆ 46,853 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದ ಅವರು, ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಲು 11,500 ಕೋಟಿ ರೂ.ನೀಡಲಾಗುತ್ತದೆ ಎಂದ ಅವರು, ಬೆಳೆ ಸಾಲಮನ್ನಾಕ್ಕೆ 12,650 ಕೋಟಿ ರೂ.ಗಳನ್ನು ಒದಗಿದ್ದು, ಇದೇ ವರ್ಷದಲ್ಲಿ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಪೋಲಿಸ್ ಸಿಬ್ಬಂದಿ ವೇತನ, ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದ ಕುಮಾರಸ್ವಾಮಿ ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ನಿರ್ಲಕ್ಷಿತ ಸಮುದಾಯಗಳ ಮಠಗಳಿಗೆ 134 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು.

ಒಟ್ಟು ಸ್ವೀಕೃತಿ-2,30,738 ಕೋಟಿ ರೂ.ಗಳಾಗಿದ್ದು, ಆ ಪೈಕಿ ರಾಜಸ್ವ ಸ್ವೀಕೃತಿ 1,81,863 ಕೋಟಿ ರೂ.ಗಳು ಮತ್ತು 48,601 ಕೋಟಿ ರೂ.ಸಾರ್ವಜನಿಕ ಋಣ ಮತ್ತು 48,876 ಕೋಟಿ ರೂ.ಬಂಡವಾಳ ಸ್ವೀಕೃತಿ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಪ್ರಧಾನಿ ಮೋದಿಗೆ ತಿರುಗೇಟು: ರೈತರ ಬೆಳೆ ಸಾಲಮನ್ನಾ ಸಂಬಂಧ ಪ್ರಧಾನಿ ಮೋದಿ ನಿನ್ನೆ ಸಂಸತ್‌ನಲ್ಲಿ ಕರ್ನಾಟಕ ಸರಕಾರದ ಸಾಲ ಮನ್ನಾ ಯೋಜನೆಯಿಂದ ಕೇವಲ 5 ಸಾವಿರ ಕುಟುಂಬಗಳಿಗಷ್ಟೇ ಅನುಕೂಲವಾಗಿದೆ ಎಂದು ಸುಳ್ಳು ಹೇಳಿದ್ದಾರೆಂದು ಟೀಕಿಸಿದ ಕುಮಾರಸ್ವಾಮಿ, ಈಗಾಗಲೇ 4 ಲಕ್ಷ ರೈತರ ಖಾತೆಗೆ ಹಣಪಾವತಿ ಮಾಡಲಾಗಿದೆ.

40 ಲಕ್ಷಕ್ಕೂ ಅಧಿಕ ಮಂದಿ ರೈತರ ಆಧಾರ್, ರೇಷನ್ ಕಾರ್ಡ್, ಜಮೀನು ಪಹಣಿ ಆಧರಿತ ದಾಖಲೆಗಳನ್ನು ಸಂಗ್ರಹಿಸಿದ್ದು, ಈಗಾಗಲೇ 5,500 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ. 3,500 ಕೋಟಿ ರೂ.ರಾಷ್ಟ್ರೀಕೃತ ಬ್ಯಾಂಕುಗಳ ಹಾಗೂ 2,500 ಕೋಟಿ ರೂ.ಸಹಕಾರ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಆಗಿದೆ ಎಂದು ವಿವರಿಸಿದರು.

ಮೇಲ್ಕಂಡ ಎಲ್ಲ ಮಾಹಿತಿಯೂ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ದೇಶದ ಯಾವುದೇ ಜಾಗದಲ್ಲಿ ಕೂತು ವೀಕ್ಷಿಸಬಹುದು. ಆದರೆ, ಚುನಾವಣೆ ಹೊಸ್ತಿಲಿನಲ್ಲಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ‘ಪ್ರಧಾನಮಂತ್ರಿ ಕೃಷಿ ಸಮ್ಮಾನ್’ ಯೋಜನೆಗೆ ಏನು ಸಿದ್ಧತೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ರೈತರ ಬೆಳೆ ಸಾಲಮನ್ನಾಕ್ಕೆ ಈ ವರ್ಷ 12,650 ಕೋಟಿ ರೂ.ಮೀಸಲಿಟ್ಟಿದ್ದೇವೆ. ಪ್ರಧಾನಿ ಕೃಷಿ ಸಮ್ಮಾನ್ ಯೋಜನೆಯಿಂದ ಕರ್ನಾಟಕದ ರೈತರಿಗೆ ಕೇವಲ 2,500 ಕೋಟಿ ರೂ.ಗಳಷ್ಟೇ ಬರಲಿದೆ. ಆದರೆ, ರಾಜ್ಯ ಸರಕಾರ ಕೃಷಿ ಪಂಪ್‌ಸೆಟ್‌ಗೆ ನೀಡುವ ಉಚಿತ ವಿದ್ಯುತ್ ಸ್ಥಗಿತಗೊಳಿಸಿದರೆ ವಾರ್ಷಿಕ 25 ಸಾವಿರ ರೂ.ನೀಡಬಹುದು ಎಂದು ತಿರುಗೇಟು ನೀಡಿದರು.

‘ಖಾಸಗಿ ಸಾಲಗಾರರಿಂದ ಕೃಷಿಕರನ್ನು ಮುಕ್ತಿಗೊಳಿಸುವ ದೃಷ್ಟಿಯಿಂದ ರಾಜ್ಯದಲ್ಲಿನ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ.3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲು ‘ಗೃಹಲಕ್ಷ್ಮಿ ಬೆಳೆಸಾಲ ಯೋಜನೆ’ ವಿಶೇಷ ಯೋಜನೆಯನ್ನು ಪ್ರಕಟಿಸಲಾಗಿದೆ’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News